ಚಿಕ್ಕಮಗಳೂರು: ನಗರದ ವ್ಯಕ್ತಿಯೊಬ್ಬರು ವಾಟ್ಸಾಪ್ ಮೂಲಕ ಕಳುಹಿಸಿದ APK ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 5,35,000 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಈ ಸಂಬಂಧ ಜನವರಿ 8, 2026 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ಸಾಮಾನ್ಯವಾಗಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬಳಸಲಾಗುವ APK ಫೈಲ್‌ಗಳು ಮಾಲ್‌ವೇರ್ ಅಥವಾ ಹ್ಯಾಕಿಂಗ್ ತಂತ್ರಾಂಶಗಳನ್ನು ಒಳಗೊಂಡಿರಬಹುದು.
ಇವುಗಳನ್ನು ಒಮ್ಮೆ ಇನ್‌ಸ್ಟಾಲ್ ಮಾಡಿದರೆ ಹ್ಯಾಕರ್‌ಗಳು ನಿಮ್ಮ ಫೋನ್‌ನ ಮೇಲೆ ಹಿಡಿತ ಸಾಧಿಸಿ, ಬ್ಯಾಂಕ್ ಒಟಿಪಿಗಳು, ಪಾಸ್‌ವರ್ಡ್‌ಗಳು ಮತ್ತು ನಿಮ್ಮ ಖಾಸಗಿ ಮಾಹಿತಿಯನ್ನು ಸುಲಭವಾಗಿ ಕದಿಯಬಲ್ಲರು.
ಆದ್ದರಿಂದ ಅಪರಿಚಿತ ಮೂಲಗಳಿಂದ ಬರುವ ಯಾವುದೇ ಲಿಂಕ್ ಅಥವಾ ಫೈಲ್‌ಗಳನ್ನು ಕ್ಲಿಕ್ ಮಾಡಬಾರದು. ಬ್ಯಾಂಕ್‌ಗಳು ಅಥವಾ ಸರ್ಕಾರಿ ಸಂಸ್ಥೆಗಳು ಎಂದಿಗೂ ವಾಟ್ಸಾಪ್ ಮೂಲಕ ಆಪ್‌ಗಳನ್ನು ಕಳುಹಿಸುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಿಡಬೇಕು.
ಒಂದು ವೇಳೆ ನೀವು ಇಂತಹ ಸೈಬರ್ ವಂಚನೆಗೆ ತುತ್ತಾದಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ www.cybercrime.gov.in ವೆಬ್‌ಸೈಟ್ ಮೂಲಕ ದೂರನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ.
Rs 5.35 lakh fraud through WhatsApp
Leave a comment