ಚಿಕ್ಕಮಗಳೂರು: ಹಸು-ಕರು ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ವಾಹನವನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಪಾರದರ್ಶಕವಾಗಿ ವಿಚಾರಣೆ ನಡೆಸಿ, ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಸಿ.ಸುನೀಲ್ ಕುಮಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲ್ಲಹಳ್ಳಿ ಗ್ರಾಮದ ಭುವನೇಶ್ ಎಂಬುವವರಿಗೆ ಸೇರಿದ ಸ.ನಂ ೭೬ ರಲ್ಲಿ ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿ ಅಲ್ಲಿಯೇ ಹಸುಗಳನ್ನು ಸಾಕುತ್ತಿದ್ದು, ಆ.೩೦ ರಂದು ದನಗಳನ್ನು ಮೇಯಿಸಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದು, ಅಂದು ರಾತ್ರಿ ಕೊಟ್ಟಿಗೆ ಬೀಗ ಒಡೆದು ಹಸು, ಕರುವನ್ನು ಕಳವು ಮಾಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭುವನೇಶ್ ದೂರು ನೀಡಿದ್ದಾರೆ ಎಂದರು.
ಕಲ್ಲಹಳ್ಳಿ ಗ್ರಾಮದ ಪ್ರತೀಶ್ ಎಂಬುವವರ ಕೋಳಿ ಫಾರಂನಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಭದ್ರಾವತಿಯ ಶೇಖರ್ ಮತ್ತು ಕೃಷ್ಣ ಎಂಬುವವರು ಭದ್ರಾವತಿಯ ವೆಂಕಟೇಶ್ ಜೊತೆಗೂಡಿ ಕಡೂರು ತಾಲ್ಲೂಕಿನ ಲಕ್ಷಿö್ಮಪುರ ಗ್ರಾಮದ ಗಂಗಾಧರ ಮತ್ತು ಅರ್ಜುನ ಇವರು ಬುಲೆರೋ ಪಿಕಪ್ ವಾಹನದಲ್ಲಿ ಹಸು ಕರುಗಳನ್ನು ಕದ್ದು ಸಾಗಿಸಿ ಭದ್ರಾವತಿಯ ಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು ಎಂದು ಹೇಳಿದರು.
ಸಂತೆಯಲ್ಲಿ ಇದ್ದ ಜನರು ಇವರ ವರ್ತನೆಯನ್ನು ಗಮನಿಸಿ ಅನುಮನಗೊಂಡು ಭದ್ರಾವತಿಯ ಹೊಸೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸ್ ಅಧಿಕಾರಿಗಳು ಕಳ್ಳರಿಂದ ಮಾಹಿತಿ ಪಡೆದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದು, ಗ್ರಾಮಾಂತರ ಪೊಲೀಸರು ಭುವನೇಶ್ ಅವರನ್ನು ಕರೆಯಿಸಿ ಎಫ್.ಐ.ಆರ್ ದಾಖಲು ಮಾಡಿ ಕದ್ದ ಹಸು ಮತ್ತು ಕರು ಮತ್ತು ಕಳ್ಳರನ್ನು ಕದ್ದ ದನಗಳ ಸಾಗಾಣಿಕೆಗಾಗಿ ಬಳಸಿದ್ದ ವಾಹನವನ್ನು ವಶಪಡಿಕೊಂಡಿದ್ದಾರೆ ಎಂದರು.
ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಹಸು ಮತ್ತು ಕರುಗಳನ್ನು ಯಾವುದೇ ನ್ಯಾಯಾಲಯದ ಆದೇಶವಿಲ್ಲದೆ ಭುವನೇಶ್ ಅವರಿಗೆ ನೀಡಿದ್ದು, ಕಳ್ಳರ ಮೇಲೆ ಕಳ್ಳತನಕ್ಕೆ ಬಳಸಿದ ವಾಹನದ ಮೇಲೆ ಕಾನೂನು ಕ್ರಮ ಜರುಗಿಸಲು ಠಾಣಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಸರಣಿ ಹಸು ಕಳ್ಳ ಸಾಗಾಣೆ ನಡೆದಿದ್ದು, ಸಿರಗಾಪುರ ಗ್ರಾಮದಲ್ಲಿ ೬ ಹಸುಗಳು ಕಳ್ಳತನವಾಗಿವೆ. ಇದರ ಬಗ್ಗೆ ಎಪ್ರಿಲ್ ೧೪ ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳ ಮಹಜರು ಮಾಡಿ ಕೇಸು ದಾಖಲಿಸುವುದಾಗಿ ಹೇಳಿ ಎಫ್.ಐ.ಆರ್ ದಾಖಲಿಸದೆ ಕನಿಷ್ಠ ತನಿಖೆಯನ್ನು ಮಾಡದೆ ಠಾಣಾಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಹೇಳಿದರು.
ಕಳ್ಳತನವನ್ನು ಮಾಡಿರುವ ಕಳ್ಳರಿಗೂ ಈಗಾಗಲೇ ನಡೆದಿರುವ ಹಸುಗಳ ಕಳ್ಳತನಕ್ಕೂ ಸಂಬAಧವಿರುವುದಾಗಿ ಕಂಡು ಬಂದಿದ್ದು, ಹಸುಗಳನ್ನು ಕಳೆದುಕೊಂಡ ಎಲ್ಲಾ ರೈತರಿಂದ ಹೇಳಿಕೆ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು. ಕಳ್ಳರಿಗೆ ಕಾನೂನು ರೀತಿಯ ಶಿಕ್ಷೆಯಾಗುವಂತೆ ಪಾರದರ್ಶಕವಾಗಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ, ಮುಖಂಡರಾದ ಮಲ್ಲುಂಡಪ್ಪ, ಲೋಕೇಶ್, ಪುಟ್ಟಣ್ಣ, ಚಂದ್ರಶೇಖರ್, ಮುಳ್ಳೇಶ್, ಶಂಕರಣ್ಣ, ರಾಮೇಗೌಡ ಉಪಸ್ಥಿತರಿದ್ದರು.
Farmers’ association takes strict legal action against cow and calf theft
Leave a comment