ಚಿಕ್ಕಮಗಳೂರು: ಎರಡು ಮನೆಕಳವು ಮತ್ತು ತೆಂಗಿನಕಾಯಿ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸರು ೧೦.೩೫ ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯ ವೇಣುಗೋಪಾಲಸ್ವಾಮಿ ದೇವಾಲಯದ ಸಮೀಪದ ಮಂಜುಳ ಎಂಬುವರ ಮನೆಯಲ್ಲಿ ಮಾರ್ಚ್ ೧೯ ರಂದು ಮನೆಯ ಬೀಗವನ್ನು ಮುರಿದು ೪೩ ಗ್ರಾಂ ಚಿನ್ನಾಭರಣಗಳು ಹಾಗೂ ೧೦ಸಾವಿರ ನಗದು ಹಣವನ್ನು ಕಳವು ಮಾಡಲಾಗಿತ್ತು.
ಅದೇ ಸ್ಥಳದಲ್ಲಿ ಜುಲೈ ೧ ರಂದು ಪಕ್ಕದ ಮನೆ ವಾಸಿಯಾದ ಪಾರ್ವತಮ್ಮ ಎಂಬುವರ ಮನೆಯ ಬೀಗವನ್ನು ಮುರಿದು ೫೧ ಗ್ರಾಂ ಚಿನ್ನಾಭರಣಗಳು, ೧೦೦ ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ೬ಸಾವಿರ ನಗದನ್ನು ಕಳ್ಳತನ ಮಾಡಲಾಗಿತ್ತು.
ನಗರದ ಎಪಿಎಂಸಿ ಆವರಣದಲ್ಲಿ ಮೂರು ತಿಂಗಳಿನಿಂದ ಈಚೆಗೆ ಮಾರ್ಕೆಟ್ ಆವರಣದ ತೆಂಗಿನಕಾಯಿ ಮಂಡಿಗಳಲ್ಲಿ ಐದಾರು ಬಾರಿ ಒಟ್ಟು ೩೪ ಚೀಲದಲ್ಲಿದ್ದ ೨೫೦೦ ತೆಂಗಿನಕಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಲಾಗಿತ್ತು. ಮಾಲೀಕರು ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆಯನ್ನು ಆರಂಭಗೊಂಡಿತ್ತು.
ಮೇಲ್ಕಂಡ ಪ್ರಕರಣಗಳಲ್ಲಿ ಅತೀ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪಪೊಲೀಸ್ ಮುಖ್ಯಾಧಿಕಾರಿ ಶೈಲೇಂದ್ರ ನೇತೃತ್ವದಲ್ಲಿ ಬಸವನಹಳ್ಳಿ ವೃತ್ತದ ಸಿಪಿಐ ವಿಜಯಕುಮಾರ ಎಂ.ಬಿರಾದಾರ ಸಿಪಿಐ ಪಿಎಸ್ಐಗಳಾದ ಕೀರ್ತಿಕುಮಾರ್, ಅಜರುದ್ದೀನ್ ಮತ್ತು ನಾಗೇಶ್ ಮತ್ತು ಬಸವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ
ರವೀಂದ್ರ, ಮಧುಸೂಧನ್, ಲಿಂಗಮೂರ್ತಿ, ಮಾಲತೇಶ, ಜಯರಾಮ, ಸತೀಶ್ ಮತ್ತು ಚಾಲಕರಾದ ಇಬ್ರಾಹಿಂ ಅವರನ್ನು ಒಳಗೊಂಡ ವಿಶೇಷ ತನಿಖಾತಂಡವನ್ನು ರಚಿಸಲಾಗಿತ್ತು.
ಈ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಕದ್ದಮಾಲು ಪತ್ತೆಯ ಬಗ್ಗೆ ವೈಜ್ಞಾನಿಕವಾಗಿ ತನಿಖೆಯನ್ನು ನಡೆಸಿ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಬಸವನಹಳ್ಳಿ ವೇಣುಗೋಪಾಲ ದೇವಾಲಯದ ಸಮೀಪ ಎರಡು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿ ಕಲ್ಲುದೊಡ್ಡಿಯ ಕೂಲಿಕಾರ್ಮಿಕ ಸಚಿನ್ ವಿ.ಡಿಸೋಜಾ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂತು.
ಆರೋಪಿಯನ್ನು ಬಂಧಿಸಿ ೬ ಲಕ್ಷರೂ ಮೌಲ್ಯದ ೭೧ ಗ್ರಾಂ ಚಿನ್ನಾಭರಣಗಳು ಹಾಗೂ ೨೫ಸಾವಿರ ಮೌಲ್ಯದ ೧೦೦ಗ್ರಾಂ ತೂಕದ ಬೆಳ್ಳಿಯ ಒಡವೆ ಆರೋಪಿಯು ಕಳವು ಮಾಡಲು ಉಪಯೋಗಿಸಿದ್ದ ಸುಮಾರು ೧ ಲಕ್ಷರೂ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಸೇರಿದಂತೆ ಒಟ್ಟು ೭.೨೫ ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಎಪಿಎಂಸಿ ಆವರಣದಲ್ಲಿ ತೆಂಗಿನಕಾಯಿ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ ತರಕಾರಿ ವ್ಯಾಪಾರ ಮಾಡು ಮೂಡಿಗೆರೆ ಪಟ್ಟಣದ ಬೆಳಗುಳ ಇಂದಿರಾ ನಗರದ ಮಹಮದ್ ನೌಷದ್, ಬಿಳಗುಳದ ವಿವೇಕಾನಗರದ ಆಟೋಚಾಲಕ ಗಣೇಶ ಅವರನ್ನು ವಶಕ್ಕೆ ಪಡೆದು ತೆಂಗಿನಕಾಯಿ ಕಳವು ಮಾಡಿ ಮಾರಾಟ ಮಾಡಿದ ೧.೧೦ ಲಕ್ಷ ರೂ. ನಗದು ಕಳವಿಗೆ ಉಪಯೋಗಿಸಿದ ಸುಮಾರು ೨ ಲಕ್ಷ ರೂ ಮೌಲ್ಯದ ಒಟ್ಟು ೧೦.೩೫ ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
ಮೂರು ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ಪತ್ತೆ ಕಾರ್ಯ ವಿಶೇಷ ತನಿಖಾ ತಂಡದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.
Two house burglaries: Police seize items worth Rs 10.35 lakh
Leave a comment