ಚಿಕ್ಕಮಗಳೂರು ಭಾರತ ದೇಶದಲ್ಲಿ ವಿವಿಧ ಧರ್ಮಗಳನ್ನು ಆಚರಣೆ ಮಾಡುಲಾಗುತ್ತದೆ, ನಾವೆಲ್ಲರೂ ಭಾರತೀಯರು, ನಮ್ಮದು ಜಾತ್ಯಾತೀತ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ದೇವನೂರು ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ ಹಿಂದೂ ಧರ್ಮದ ಆಚರಣೆಯಲ್ಲಿ ಆಷಾಡ ಮಾಸ ಕಳೆದ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ, ಶುಭಕಾರ್ಯಗಳನ್ನು ನಡೆಸುವ ಈ ಮಾಸದಲ್ಲಿ ಪೂಜೆ, ಹಬ್ಬಗಳನ್ನು ಮಾಡಲಾಗುತ್ತದೆ ಅಂತಹ ಹಬ್ಬಗಳಲ್ಲಿ ಶ್ರೇಷ್ಠವಾದ ಹಬ್ಬ ಬಯಲುಸೀಮೆ ಭಾಗದ ಕೆರೆಗಳನ್ನು ತುಂಬಿಸಿ, ಕೊಡಿ ಹರಿಸಿ, ಗಂಗಾ ಪೂಜೆ ಮಾಡುವುದೇ ಒಂದು ದೊಡ್ಡ ಹಬ್ಬ ಎಂದರು.
ನುಡಿದಂತೆ ನಡೆದ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆಶೀರ್ವಾದದಿಂದ ಎತ್ತಿನ ಹೋಳೆ ಭಾಗದಿಂದ ನೀರನ್ನು ಏತನೀರಾವರಿ ಮುಖಾಂತರ ಬೆಳವಾಡಿ ಕೆರೆ, ದೇವನೂರು ಕೆರೆ, ಮಾಚೇನಹಳ್ಳಿ ಕೆರೆ, ಕುರುಬರಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗಿದ್ದು ಇಂತಹ ಬಡವರ, ದೀನ ದಲಿತರ, ಹಿಂದುಳಿದ ವರ್ಗ ಹಾಗೂ ಎಲ್ಲಾ ವರ್ಗದ ಜನರ ಬದುಕಿನ ಬಗ್ಗೆ ಯೋಚಿಸುವ ಸರ್ಕಾರಕ್ಕೆ ನೀವು ಅಭಿನಂದನೆ ಸಲ್ಲಿಸಿದರೆ ಅವರ ಜೊತೆಯಲ್ಲಿ ಕೆಲಸ ಮಾಡವ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಜನರಿಗೆ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.
ಇಪ್ಪತೈದು ವರ್ಷಗಳಲ್ಲಿ ಬೆಳವಾಡಿ ಕೆರೆ, ಮಾಚೇನಹಳ್ಳಿ ಕೆರೆ ೨ ಬಾರಿ ದೇವರ ಕೃಪೆಯಿಂದ ತುಂಬಿತ್ತು,
ಕಡೂರು ಕ್ಷೇತ್ರ ಶಾಸಕ ಕೆ.ಎಸ್ ಆನಂದ್ ಹಾಗೂ ಪಕ್ಷದ ಎಲ್ಲಾ ಮುಖಂಡರ ನಿಯೋಗದೊಂದಿಗೆ ಮುಖ್ಯ ಮಂತ್ರಿ, ಉಪ ಮುಖ್ಯ ಮಂತ್ರಿ ಯೊಂದಿಗೆ ಚರ್ಚಿಸಿ ನಂತರ ಭದ್ರಾ ಉಪಕಣಿವೆ ಯೋಜನೆಯ ೩ನೇ ಹಂತಕ್ಕೆ ಸುಮಾರು ೪೦೦ ಕೋಟಿ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದರು.
ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಕಡೂರು ತಂಗ್ಲಿಕೆರೆಯಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರೆವೇರಿಸಲಾಗುವುದು, ನಂತರ ಎರಡು ವರ್ಷಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ರೈತರಿಗೆ ಯಾವುದೇ ಜಾತಿ, ಪಕ್ಷ ಇಲ್ಲ, ಎಲ್ಲಾ ರೈತರಿಗೆ, ಬಡವರಿಗೆ ನ್ಯಾಯವನ್ನು ಒದಗಿಸುವ ಜೊತೆಗೆ ಸಮಾಜದ ಮುನ್ನೆಲೆಗೆ ತರುವುದು ನಮ್ಮ ಕಾಂಗ್ರೆಸ್ ಸರ್ಕಾರ, ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಬಡವರ ಬದುಕನ್ನು ಹಸನಾಗಿಸಲು ೫ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು ಅದರಂತೆ ಸರ್ಕಾರ ಅಧಿಕಾರಕ್ಕೆ ಬಂದ ೫ ತಿಂಗಳೊಳಗಾಗಿ ನುಡಿದಂತೆ ನಡೆದಿದೆ ಎಂದರು.
ಜನ ಪ್ರತಿನಿಧಿಯಾಗಿ ಕೆಲಸವನ್ನು ಮಾಡುವ ಅವಕಾಶವನ್ನು ಜನರು ಮಾಡಿಕೊಟ್ಟಾಗ, ನಾನು ಎಂಬುವುದನ್ನು ಬಿಟ್ಟು ಜನರಿಗಾಗಿ, ರೈತರ ಬದುಕಿಗಾಗಿ ಜನರ ಸೇವೆ ಮಾಡುವುದು ಜನ ಪ್ರತಿನಿಧಿಗಳ ಕರ್ತವ್ಯ ಎಂದು ತಿಳಿದು, ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಅದರ ಪುಣ್ಯವನ್ನು ದೇವರು ನೀಡುತ್ತಾರೆ, ಹಾಗೂ ಜನರು ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಅನುದಾನವನ್ನು ಸೀಮಿತಗೊಳಿಸದೆ ಅಭಿವೃದ್ಧಿಗಳಿಗೂ ಸಮಯ ಮತ್ತು ಅನುದಾನವನ್ನು ನೀಡಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಜನರ ಕಣ್ಣೀರನ್ನು ಹೊರೆಸಲು ಕಾಂಗ್ರೆಸ್ ಸರ್ಕಾರ ಸಹಕಾರಿಯಾಗಿದ್ದು, ಗ್ರಾಮ ಪಂಚಾಯಿತಿ ಯಿಂದ ದೆಹಲಿ ವರೆಗೂ ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದಾಗ ಅದನ್ನು ಗುರುತಿಸಿ ಪ್ರಶಂಸಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.
೨೦೧೩ರ ಕಾಂಗ್ರೆಸ್ ಸರ್ಕಾರದ ನೇತೃತ್ವದ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಎತ್ತಿನ ಹೊಳೆ ಶಂಕುಸ್ಥಾಪನೆ ಮಾಡುವ ಸಮಯದಲ್ಲಿ ಇದರಿಂದ ನೀರು ಹರಿಸಲು ಆಗುವುದೇ ಎಂದು ಹಲವು ರೀತಿಯ ಟೀಕೆಗಳನ್ನು ಮಾಡಲಾಗಿತ್ತು, ಯಾವಾಗಲು ಕೆಲಸವನ್ನು ಮಾಡಿ ಮಾಡಿದ್ದೇವೆ ಎಂದು ಹೇಳಬೇಕು ಎಂದು ತಿಳಿಸಿದರು.
ಅಂದು ಗುದ್ಧಲಿ ಪೂಜೆ ಮಾಡಲಾಗಿತ್ತು, ೨೦೨೩ ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದು, ಡಿ.ಕೆ ಶಿವಕುಮಾರ್ ಉಪಮುಖ್ಯ ಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾಗಿದ್ದು ಅದರಿಂದ ಸಕಲೇಶಪುರದ ಗುಂಡ್ಯ ಜಾಗದಿಂದ ಹಳೇಬಿಡು ಕೆರೆಗೆ ನೀರನ್ನು ಹರಿಸಿ ಅಲ್ಲಿಂದ ಬೆಳವಾಡಿ ಕೆರೆಗೆ ನೀರನ್ನು ತುಂಬಿಸಲಾಗಿದೆ ಎಂದರು.
೨೫-೩೦ ವರ್ಷಗಳ ನಂತರ ಹೆಚ್.ಡಿ ತಮ್ಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದಿಂದ ನಮ್ಮ ಕ್ಷೇತ್ರದ ಜನತೆ ಶಾಸಕರನ್ನಾಗಿ ಆಯ್ಕೆ ಮಾಡಿದ ಸಮಯದಲ್ಲಿ ನಮ್ಮ ಕ್ಷೇತ್ರದ ಜನರ ಕಣ್ಣೀರನ್ನು ಹೊರೆಸುವಂತೆ ತಿಳಿಸಲಾಗಿತ್ತು, ಅದರಂತೆ ಇಂದು ನಡೆದುಕೊಂಡ ಕಾಂಗ್ರೆಸ್ ಸರ್ಕಾರ ಮತ್ತು ಶಾಸಕ ಹೆಚ್.ಡಿ ತಮ್ಮಯ್ಯ ಅವರಿಗೆ ಕ್ಷೇತ್ರದ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.
ತೆಂಗಿನ ಮರ, ಅಡಿಕೆ ಬೆಳೆ, ಕುಡಿಯಲು ನೀರು ಇಲ್ಲದೆ, ದೇವನೂರು ಕ್ಷೇತ್ರದ ಹಲವಾರು ಯುವಕರು ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದರು, ಈ ಸಮಯದಲ್ಲಿ ೫ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಶಾಸಕರು ಇರುವುದರಿಂದ ಎಲ್ಲೂ ವಿರೋದ ವ್ಯಕ್ತಪಡಿಸದೇ ಶಾಶ್ವತ ನೀರು ಪರಿಹಾರವನ್ನು ಒದಗಿಸಲು ಮುಂದಾಗಿರುವ ಶಾಸಕ ತಮ್ಮಯ್ಯ, ಆನಂದ್ ರವರಿಗೆ ಎಲ್ಲರೂ ಸಹಕಾರವನ್ನು ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್ ಪ್ರಾಸ್ತವಿಕ ನುಡಿ ಮಾತನಾಡಿ ಬೆಳವಾಡಿ ಕೆರೆ ಮತ್ತು ದೇವನೂರು ಕೆರೆಗೆ ಇಂದು ಬಾಗಿನ ಬಿಡುವ ಸಂಭ್ರಮದ ದಿನವಾಗಿದ್ದು, ೨೫ ವರ್ಷಗಳಿಂದ ಈ ಭಾಗದ ಕೆರೆಗಳನ್ನು ತುಂಬಿಸುವ ಹೋರಾಟ ನಡೆದುಕೊಂಡು ಬಂದಿದ್ದು, ನಿಮ್ಮೆಲ್ಲರ ಕಣ್ಣೀರಿನ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಿದೆ ಎಂದರು.
ಎತ್ತಿನ ಹೋಳೆ ಮೂಲಕ ಹಳೆಬೀಡು ಕೆರೆ ತುಂಬಿಸಿ ಅಲ್ಲಿಂದ ಬೆಳವಾಡಿ ಕೆರೆ, ಮಾಚೇನಹಳ್ಳಿ ಕೆರೆ ಸೇರಿದಂತೆ ಹಲವಾರು ಸಣ್ಣ-ಸಣ್ಣ ಕೆರೆಗಳನ್ನು ತುಂಬಿಕೊಂಡು ದೇವನೂರು ಕೆರೆಗೆ ನೀರನ್ನು ತರಲಾಗುತ್ತಿದೆ, ೨೦೧೩ ರಲ್ಲಿ ಶಂಕುಸ್ಥಾಪನೆ ನೆರೆವೇರಿಸಿದರು ೨೦೨೩ ರಲ್ಲಿ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು ಎಂದರು.
ಹಾಸನದ ನಾಯಕರು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಎತ್ತಿನ ಹೋಳೆ ಯೋಜನೆ ತೆಗೆದುಕೊಂಡ ಸಮಯದಲ್ಲಿ, ಈ ಹಿಂದೆ ೨೦ ವರ್ಷಗಳಿಂದ ನಿರಂತರವಾಗಿ ಇದ್ದಂತಹ ಶಾಸಕರು ಮತ್ತು ಮುಖಂಡರುಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಡೂರು ಶಾಸಕ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಗ್ಯಾರಂಟಿ ಸಂವಿದಾನ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ರಾಜ್ಯ ಪರಿಸರಮಾಲಿನ್ಯ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಸಣ್ಣ ನೀರಾವರಿ ಇಲಾಖೆ ದಕ್ಷಿಣಮೂರ್ತಿ, ಪಕ್ಷದ ಮುಖಂಡರುಗಳಾದ ಬಸವರಾಜ್, ಗ್ರಾಪಂ ಅಧ್ಯಕ್ಷೆ ದೀಪದಕ್ಷಿಣ ಮೂರ್ತಿ, ಬಸವರಾಜಣ್ಣ, ಚಂದ್ರಪ್ಪ, ಹೇಮಾವತಿ, ಬಾಬು ಷಡಾಕ್ಷರಿ, ಶಂಕರ್ ನಾಯಕ್, ಅಮೀರ್, ಹೊನ್ನಪ್ಪ, ಕೆಂಗೇಗೌಡ, ಉಪಸ್ಥಿತರಿದ್ದರು, ಸಂತೋಷ್ ಸ್ವಾಗತಿಸಿ ವಂದಿಸಿದರು.
Offering to Devanur Lake Kodibidda
Leave a comment