ಚಿಕ್ಕಮಗಳೂರು: ಟೌನ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡಕ್ಕೆ ಎಂ.ಜಿ ರಸ್ತೆಯಲ್ಲಿರುವ ನಿವೇಶನದಲ್ಲಿ ಆ.೧೫ ರಂದು ಶುಕ್ರವಾರ ಶಂಕುಸ್ಥಾಪನೆ ಹಾಗೂ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿ ಜನಸ್ನೇಹಿ ಆಡಳಿತ ನೀಡುವ ಉದ್ದೇಶದೊಂದಿಗೆ ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ಕಳೆದ ಡಿಸೆಂಬರ್ನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ನಮ್ಮ ತಂಡ ಅಧಿಕಾರಕ್ಕೆ ಬಂದರೆ ಜನಸ್ನೇಹಿ ಸಹಕಾರಿ ಸಂಘವನ್ನು ನಡೆಸಲಾಗುತ್ತಿದೆ. ಅದರಂತೆ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಸದಸ್ಯರಿಗೆ ಡಿಜಿಟಲೀಕರಣ ಮಾಡಿ ಮೊಟ್ಟ ಮೊದಲ ಬಾರಿಗೆ ಸಹಕಾರಿ ಆಪ್ ಪರಿಚಯಿಸಲಾಗಿದೆ ಎಂದು ಹೇಳಿದರು.
ಷೇರುದಾರರ ಬೆರಳು ತುದಿಯಲ್ಲಿ ಮೊಬೈಲ್ನಿಂದ ವ್ಯವಹಾರದ ಮಾಹಿತಿಯನ್ನು ವೀಕ್ಷಿಸಲು ಅನುಕೂಲ ಮಾಡಿದ್ದು, ಈಗಾಗಲೇ ಎಸ್ಎಂಎಸ್ ಸೇವೆಯನ್ನು ರವಾನಿಸಲು ಸಿದ್ದತೆ ನಡೆಯುತ್ತಿವೆ. ಕಚೇರಿ ಡಿಜಿಟಲೀಕರಣಗೊಳಿಸಿರುವ ಬಗ್ಗೆ ಷೇರುದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ಆ.೧೫ ರಂದು ಬೆಳಗ್ಗೆ ೧೦ ಗಂಟೆಗೆ ಸರ್ವ ಸದಸ್ಯರ ಸಭೆ, ಮಧ್ಯಾಹ್ನ ೧೨.೧೫ ಕ್ಕೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಅವರು ಉದ್ಘಾಟನೆ ನಡೆಸುತ್ತಿದ್ದು, ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕರಾದ ಹೆಚ್.ಡಿ. ತಮ್ಮಯ್ಯ, ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಹಾಲಮ್ಮ ರಾಮಚಂದ್ರ, ಮಾಜಿ ಅಧ್ಯಕ್ಷರಾದ ಬಿ.ಎನ್ ರಾಜಣ್ಣಶೆಟ್ಟಿ, ಕೇಶವಮೂರ್ತಿ, ನಿರ್ದೇಶಕರಾದ ಕೋಟೆ ಈಶ್ವರಪ್ಪ, ಅಂಬಿಕಾ ಮಹೇಶ್, ಕಾರ್ಯದರ್ಶಿ ಗಾಯಿತ್ರಿ ಸತೀಶ್ ಉಪಸ್ಥಿತರಿದ್ದರು.
Foundation stone laid for new Town Co-operative Society building on August 15
Leave a comment