ಚಿಕ್ಕಮಗಳೂರು: ನಗರದ ಪೊಲೀಸ್ ಲೇಔಟ್‌ನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸುಮಾರು 50 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳುವು ಆಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಲೇಔಟ್ ನಿವಾಸಿ ಪುಪ್ಪೇಗೌಡ ಅವರು ಕುಟುಂಬದ ಸಮೇತರಾಗಿ ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ಕಳುವುವಾಗಿದ್ದು, ಸುಮಾರು 490 ಗ್ರಾಂ ಚಿನ್ನಾಭರಣ ಕಳುವು ಮಾಡಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸರು ಈ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಅವರ ಬಡಾವಣೆಗೆ ಕಳ್ಳರು ಬಂದು ಕಳುವು ಮಾಡಿರುವುದು ಇಲಾಖೆ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದೆ.
ಸಾರ್ವಜನಿಕರೇ ಹುಷಾರ್ ನಗರದ ತುಳಸಿ ಲೇಔಟ್, ಪೊಲೀಸ್ ಲೇಔಟ್, ಡಾ. ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ ಆಗಾಗ ಮನೆಗಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಅವುಗಳು ಈಗಲೂ ಮುಂದುವರೆದಿವೆ ಎಂಬುದಕ್ಕೆ ಪೊಲೀಸ್ ಲೇಔಟ್‌ನಲ್ಲಿ ಜೂ. ೧೯ ರಂದು ರಾತ್ರಿ ನಡೆದಿರುವ ಘಟನೆಯೇ ಸಾಕ್ಷಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಪುಪ್ಪೇಗೌಡರ ಮನೆಯಲ್ಲಿ ಕಳುವು ಆಗಿ ಎರಡೇ ದಿನಕ್ಕೆ ಅಂದರೆ ಜೂನ್ ೨೧ ರ ರಾತ್ರಿ ಆರು ಮಂದಿಯ ಗ್ಯಾಂಗ್ ರಾತ್ರಿ ವೇಳೆಯಲ್ಲಿ ಓಡಾಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಗರದ ಬೈಪಾಸ್ ರಸ್ತೆಯಲ್ಲಿರುವ ಎಐಟಿ ಲೇಡಿಸ್ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ೬ ಮಂದಿ ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಬಾಗಿಲು, ಗೇಟ್ ಮುರಿಯುವ ಕಬ್ಬಿಣದ ವಸ್ತುಗಳು ಹಾಗೂ ಬ್ಯಾಗ್ ಸಹಿತ ಓಡಾಡುತ್ತಿರುವುದು ಕಂಡು ಬಂದಿದೆ.
ಅಂದರೆ ಮನೆಗಳ್ಳತನದ ನಂತರವೂ ಕಳ್ಳರ ಗ್ಯಾಂಗ್ ಅದೇ ಬಡಾವಣೆಯ ಸಮೀಪದಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಬಡಾವಣೆಯಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸರು ಬೀಟ್‌ಗೆ ಬರುತ್ತಿಲ್ಲ. ಹಾಗಾಗಿ ಕಳ್ಳರಿಗೆ ಭಯ ಎಂಬುದು ಹೊರಟು ಹೋಗಿದೆ. ಮನೆಗಳಿಗೆ ಹಾಗೂ ಈ ಭಾಗದ ನಿವಾಸಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
Gold jewellery worth Rs 50 lakh stolen in Police Layout
Leave a comment