ಚಿಕ್ಕಮಗಳೂರು: ಕಳೆದ ಬಾರಿಯ ಮುಂಗಾರು ಹಾಗೂ ಈ ವರ್ಷದ ಮುಂಗಾರು ಪೂರ್ವದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ ಸೇರಿದಂತೆ ವಿವಿಧೆಡೆ ಹಾನಿ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರೊಂದಿಗೆ ಶನಿವಾರ ಚಂದ್ರದ್ರೋಣ ಪರ್ವತಶ್ರೇಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶನಿವಾರ ಬೆಳಗ್ಗೆ ಇಲಾಖೆ ಅಧಿಕಾರಿಗಳು ಹಾಗೂ ಶಾಸಕ ಎಚ್.ಡಿ.ತಮ್ಮಯ್ಯ ಅವರೊಂದಿಗೆ ಸೇರಿ ಕಳೆದ ಮಳೆಗಾಲದ ಅವಧಿಯಲ್ಲಿ ಎಲ್ಲೆಲ್ಲಿ ರಸ್ತೆ ಕುಸಿತ ಸಂಭವಿಸಿತ್ತು ಹಾಗೂ ಎಲ್ಲೆಲ್ಲಿ ರಸ್ತೆಗಳಿಗೆ ಹಾನಿ ಸಂಭವಿಸಿತ್ತು ಎಲ್ಲೆಡೆಯೂ ತೆರಳಿ ಪರಿಶೀಲನೆ ನಡೆಸಿದರು. ಜೊತೆಗೆ ಈ ಬಾರಿ ಪೂರ್ವ ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಂಭವಿಸಿದ ಹಾನಿ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆ ಕುಸಿತವಾಗದಂತೆ ಹಾಗೂ ರಸ್ತೆಗಳಿಗೆ ಹಾನಿ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ಮಳೆಗಾಲದ ಅವಧಿಯಲ್ಲಿ ಕವಿಕಲ್ ಗಂಡಿ ಬಳಿ ರಸ್ತೆ ಕುಸಿತವಾಗಿದ್ದ ಪರಿಣಾಮ ದತ್ತಪೀಠಕ್ಕೆ ಒಂದು ತಿಂಗಳಕಾಲ ಮಾರ್ಗ ಸ್ಥಗಿತಗೊಂಡಿತ್ತು. ಜೊತೆಗೆ ಕಳೆದ ಬಾರಿ ಧರೆ ಕುಸಿತವಾದ ಪ್ರದೇಶದ ಬಳಿಯೇ ಮತ್ತೆ ಧರೆ ಕುಸಿತವಾಗುವ ಸಂಭವವಿರುವ ಹಿನ್ನೆಲೆಯಲ್ಲಿ ಕೂಡಲೇ ಕವಿಕಲ್ ಗಂಡಿ ಬಳಿ ನಡೆಯುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿ ಕೂಡಲೇ ಮುಗಿಸಬೇಕು. ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವಾರ ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಚಿವರು ಮುಂಗಾರು ಪೂರ್ವ ಧಾರಾಕಾರ ಮಳೆಯಿಂದ ಮಲೆನಾಡು ಭಾಗದಲ್ಲಿ ಸಂಭವಿಸಿದ್ದ ಹಾನಿ ಪರಿಶೀಲನೆ ನಡೆಸಿದ್ದರು. ಇದೆ ವೇಳೆ ಚಂದ್ರದ್ರೋಣ ಪರ್ವತ ಶ್ರೇಣಿಗೂ ಆಗಮಿಸಿ ಹಾನಿ ಪರಿಶೀಲನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆ ಕೇವಲ ಒಂದು ವಾರದ ಅವಧಿಯಲ್ಲಿಯೇ ಚಂದ್ರದ್ರೋಣ ಪರ್ವತಶ್ರೇಣಿಗೆ ಆಗಮಿಸಿ ಮಳೆಹಾನಿ ಪರಿಶೀಲನೆ ನಡೆಸಿದ್ದು ವಿಶೇಷವಾಗಿತ್ತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಜಿಲ್ಲೆ ಮತ್ತು ತಾಲೂಕಿಗೆ ಅನುಕೂಲವಾಗುವಂತೆ ಮೊದಲ ಆದ್ಯತೆ ನೀಡಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದಾಗಿ ತಿಳಿಸಿದರು.
ಪ್ರಮುಖವಾಗಿ ಮಹಲ್‌ನಿಂದ ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಇದೆ. ಕಳೆದ ೧೦ ವರ್ಷಗಳಿಂದ ಈ ರಸ್ತೆ ಮುಚ್ಚಲ್ಪಟ್ಟಿದೆ. ಈ ಹಿಂದೆ ಇದ್ದ ರಸ್ತೆಯನ್ನು ಮತ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಕಡೆಯಿಂದ ಸಮಸ್ಯೆ ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಅವಶ್ಯಕತೆ ಇದ್ದಲ್ಲಿ ಆ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮಲೆನಾಡು ಪ್ರದೇಶವಾದ ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮಾಡುವುದೊಂದೇ ಪರಿಹಾರ. ಈಗಾಗಲೇ ಮೂಡಿಗೆರೆ ತಾಲ್ಲೂಕಿನ ಚಂಡಗೋಡು-ಸಾರಗೋಡು ರಸ್ತೆಯನ್ನು ಕಾಂಕ್ರೀಟಿಕರಣ ಗೊಳಿಸಲಾಗುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರು ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿರುವ ಕುರಿತು ಮಾತನಾಡಿ, ಈ ವಿಚಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದಿದೆ. ಮುಂಬರುವ ಸಭೆಯಲ್ಲಿ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದರು.
ಗಿರಿ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳು ಹಾಳಾಗುತ್ತಿವೆ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ರಸ್ತೆಯ ಒಂದು ಬದಿಯಲ್ಲಿ ಚರಂಡಿಗಳನ್ನು ಬಿಡಿಸುವ ಕೆಲಸ ಆಗುತ್ತಿದೆ. ಮುಳ್ಳಯ್ಯನಗಿರಿಗೆ ಬದಲಿ ರಸ್ತೆ ಇಲ್ಲದಿರುವ ಬಗ್ಗೆ ಗಮನ ಹರಿಸಲಾಗಿದೆ. ಮಲ್ಲಂದೂರಿನಿಂದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಬಗ್ಗೆಯೂ ಪರಿಶೀಲಿಸುತ್ತೇವೆ ಎಂದರು.
ಬೇಲೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ಕೆ ಇನ್ನೆರಡು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಕಳೆದ ತಿಂಗಳು ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ರಸ್ತೆಗಳು ಹದಗೆಟ್ಟಿದ್ದು, ಈ ಬಗ್ಗೆಯೂ ಪರಿಶೀಲಿಸಿದ ಸಚಿವರು, ಕವಿಕಲ್ ಬಳಿ ಉಂಟಾಗಿದ್ದ ಭೂಕುಸಿತಕ್ಕೆ ಗೋಡೆ ನಿರ್ಮಿಸುವ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಅತ್ತಿಗುಂಡಿ ಹಾಗೂ ಮಹಲ್ ಬಳಿ ಉಂಟಾಗಿರುವ ರಸ್ತೆ ಹಾನಿಯನ್ನು ಪರಿಶೀಲನೆ ನಡೆಸಿದರಲ್ಲದೆ, ವಿವಿಧ ಕಾಮಗಾರಿಗಳ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಶೀಘ್ರ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಮುಖಂಡರಾದ ಎಚ್.ಪಿ.ಮಂಜೇಗೌಡ, ಬೆಟ್ಟಗೆರೆ ಪ್ರವೀಣ್ ಮತ್ತಿತರ ಪ್ರಮುಖರು ಇದ್ದರು.
Minister inspects rain damage in Chandradrona mountain range
Leave a comment