ಎನ್.ಆರ್.ಪುರ: ಹೆರಿಗೆಯಾಗಿ ೨ ದಿನದಲ್ಲೇ ಮಗುವನ್ನು ೧ ಲಕ್ಷ ರೂ.ಗೆ ಮಾರಾಟ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.
ಹರಾವರಿ ಗ್ರಾಮದ ರತ್ನ, ಸದಾನಂದ ದಂಪತಿಗಳು ಹಾಗೂ ಕೊಪ್ಪದ ನಿವೃತ್ತ ನರ್ಸ್ ಕುಸುಮ ಬಂಧಿತರು. ನರಸಿಂಹರಾಜಪುರ ಪೊಲೀಸರು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವಿರ: ಕಾನೂರು ಗ್ರಾಮ ಪಂಚಾಯಿತಿಯ ಹರಾವರಿ ಗ್ರಾಮದ ಕೋಣನಗುಡ್ಡದ ರತ್ನ ಹೆರಿಗೆಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ ೨೨ ರಂದು ಹೆಣ್ಣು ಮಗುವಿನ ಜನನವಾಗಿತ್ತು. ಮಗು ಹುಟ್ಟಿ ೨ ದಿನಕ್ಕೆ ಕೊಪ್ಪದ ನಿವೃತ್ತ ನರ್ಸ್ ಕುಸುಮ ಎಂಬುವರ ಮೂಲಕ ೧ ಲಕ್ಷ ರುಪಾಯಿಗೆ ಮಗು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡು ಸ್ವಲ್ಪಹಣ ಪಡೆದು ಮಗುವನ್ನು ಕಾರ್ಕಳದ ರಾಘವೇಂದ್ರ ಅವರಿಗೆ ಮಾರಾಟ ಮಾಡಲಾಗಿತ್ತು.
ಈ ಬಗ್ಗೆ ಮಾಹಿತಿ ತಿಳಿದ ನರಸಿಂಹರಾಜಪುರ ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಒಟ್ಟಾಗಿ ಕಾರ್ಕಳಕ್ಕೆ ಹೋಗಿ ಮಗುವನ್ನು ಸುರಕ್ಷಿತವಾಗಿ ತಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.
ಮಗು ಪಡೆದ ರಾಘವೇಂದ್ರ ನಿವೃತ್ತ ನರ್ಸ್ ಕುಸುಮ ಅವರ ಸಹೋದರನಾಗಿದ್ದಾನೆ. ತಮಗೆ ಮಕ್ಕಳು ಇಲ್ಲದೆ ಇರುವುದರಿಂದ ಸಾಕಲು ಮಗು ಪಡೆದಿದ್ದೇನೆ ಎಂದು ಮಗು ಪಡೆದ ಕಾರ್ಕಳದ ರಾಘವೇಂದ್ರ ಪೊಲೀಸರ ತನಿಖೆಯಲ್ಲಿ ತಿಳಿಸಿದ್ದಾನೆ.
ನರಸಿಂಹರಾಜಪುರ ಪೊಲೀಸರು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿ ಮಗುವಿನ ತಂದೆ ಸದಾನಂದ, ತಾಯಿ ರತ್ನ ಹಾಗೂ ಮಗು ಮಾರಾಟಕ್ಕೆ ಮದ್ಯವರ್ತಿಯಾಗಿ ಕೆಲಸ ಮಾಡಿದ ನಿವೃತ್ತ ನರ್ಸ್ ಕುಸುಮ ಅವರನ್ನು ಬಂಧಿಸಿದ್ದಾರೆ.
2-day-old baby sold – Three arrested
Leave a comment