ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿರುವುದರಿಂದ ಮೇ.೨೭ ರಂದು ಅನಿರ್ದಿಷ್ಟಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪೌರನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಅಣ್ಣಯ್ಯ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ಬೇಡಿಕೆ ಈಡೇರುವ ತನಕ ಹಂತಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ ಅವರು, ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಇದುವರೆಗೂ ರಾಜ್ಯಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯನ್ನು ಕರೆದಿಲ್ಲವೆಂದು ಹೇಳಿದರು.
ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿ ೪೫ ದಿನಗಳ ಅನಿರ್ದಿಷ್ಟಕಾಲ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು, ರಾಮನಗರದಲ್ಲಿ ರಾಜ್ಯ ಪರಿಷತ್ತಿನ ಸರ್ವಸದಸ್ಯರ ಸಭೆ ನಡೆಸಿದ್ದು, ಮೇ.೨೭ರಿಂದ ಮುಷ್ಕರ ನಡೆಸಲಾಗುತ್ತಿದೆ. ಇಂದು ಸಾಂಕೇತಿಕವಾಗಿ ರಾಜ್ಯಾದ್ಯಂತ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಖನಿ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ನಾಗರಿಕ ನಿಯಮ ಅಧಿನಿಯಮ ೧೯೭೮ರನ್ನು ಕರ್ನಾಟಕ ಪೌರಸೇವಾ ನೌಕರರಿಗೆ ಅನ್ವಯಿಸುವುದು ಹಾಗೂ ಪಂಚಾಯತ್ ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ಮಾದರಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರೆಂದು ಪರಿಗಣಿಸಬೇಕು. ಸರ್ಕಾರಿ ನೌಕರರು ಪಡೆಯುವ ಸೌಲಭ್ಯಗಳನ್ನು ನಮಗೂ ವಿಸ್ತರಿಸಲು ಶಾಸನ ಸಭೆಯಲ್ಲಿ ಕಾಯ್ದೆರೂಪಿಸಬೇಕೆಂದು ಒತ್ತಾಯಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ನೀರುಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿದೀನ ಸಹಾಯಕರು ಲೋಡರ್ಸ್, ಪಾರ್ಕ್, ಗಾರ್ಡನರ್ಕಾವಲುಗಾರ, ಸ್ಯಾನಿಟರಿ ಸೂಪರ್ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ನೌಕರರನ್ನು ನೇರಪಾವತಿಗೆ ಒಳಪಡಿಸಬೇಕೆಂದು ತಿಳಿಸಿದರು.
ಘನತ್ಯಾಜ್ಯ ವಸ್ತು ನಿರ್ವಹಣೆಗೆ ಮತ್ತು ಮಾಲಿನ್ಯ ನೀರು ನಿರ್ವಹಣೆಗೆ ಅಗತ್ಯವಾದ ವಾಹನಗಳನ್ನು ಖರೀದಿಸುತ್ತಿದ್ದು, ಈ ವಾಹನಗಳಿಗೆ ಪೂರಕವಾಗಿ ವೃಂದ ಮತ್ತು ನೇಮಕಾತಿಯಲ್ಲಿ ವಾಹನ ಚಾಲಕ ಹುದ್ದಗಳನ್ನು ಮಂಜೂರು ಮಾಡದೆ ಇರುವುದರಿಂದ ಶಾಶ್ವತ ವಾಹನ ಚಾಲಕರನ್ನು ನೇಮಕಮಾಡಿಕೊಳ್ಳಲು ತೊಡಕಾಗಿದ್ದು, ಈ ಅಂಶವನ್ನು ಸಮಗ್ರವಾಗಿ ಪರಿಶೀಲಿಸಿ ಮಂಜೂರಾತಿ ಹುದ್ದೆಗಳನ್ನು ಸಕ್ರಮಗೊಳಿಸಬೇಕೆಂದು ಆಗ್ರಹಿಸಿದರು.
ನಗರ ಸ್ಥಳೀಯ ಸಂಸ್ಥೆಗಳಿಗೆ ಮುಖ್ಯವಾಗಿ ನಗರಸಭೆ ಮತ್ತು ಪುರಸಭೆಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನುಅನುಷ್ಟಾನಗೊಳಿಸಿ ನಗರಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಹಣೆಗೆ ಹಸ್ತಾಂತರಿಸುತ್ತಿದ್ದು, ಇವುಗಳ ನಿರ್ವಹಣೆಗೆ ಅಗತ್ಯವಾದ ತಜ್ಞ ಸಿಬ್ಬಂದಿಗಳನ್ನು ಮಹಾನಗರಪಾಲಿಕೆ ವೃಂದ ಮತ್ತು ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿರುವಂತೆ ನಗರಸ್ಥಳೀಯ ಸಂಸ್ಥೆಗಳ ವೃಂದ ಮತ್ತು ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಸರ್ಕಾರವನ್ನು ಕೋರಿದರು.
ನೇರ ಪಾವತಿಯಲ್ಲಿರುವ ಪೌರಕಾರ್ಮಿಕರು,ಲೋಡರ್ಸ್, ಕ್ಲೀನರ್ಸ್ ಮರಣಹೊಂದಿದಲ್ಲಿ ೧೦ ಲಕ್ಷ ರೂ.ಗಳನ್ನು ಅವಲಂಬಿತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು. ಮಾನವೀಯ ದೃಷ್ಟಿಯಿಂದ ಅನುಕಂಪ ಆಧಾರದ ಮೇಲೆ ಕುಟುಂಬದವರಿಗೆ ಹುದ್ದೆ ನೀಡುವುದು ಸೇರಿದಂತೆ ಒಟ್ಟು ೧೯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಹೇಳಿದರು.
ಪೌರನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ, ಪದಾಧಿಕಾರಿಗಳಾದ ಸುನೀಲ್ಕುಮಾರ್, ಪಾಪಣ್ಣ, ರಮೇಶ್ ಇದ್ದರು.
Indefinite strike by civic employees in the district from today
Leave a comment