ಚಿಕ್ಕಮಗಳೂರು: :ಜಿಲ್ಲೆಯ ಮಾದಿಗ ಸಮುದಾಯದ ಜನ ಜಾತಿ ಜನಗಣತಿ ಸಂದರ್ಭದಲ್ಲಿ ಗಣತಿದಾರರು ಮನೆಬಾಗಿಲಿಗೆ ಬಂದಾಗ ತಮ್ಮ ಜಾತಿಯನ್ನು ಸಂಕೋಚವಿಲ್ಲದೆ ಮಾದಿಗ ಎಂದು ಬರೆಯಿಸಿ, ಇತರೆ ೧೦೦ ಪರಿಶಿಷ್ಟ ಜಾತಿಯ ಜನರೂ ಕೂಡ ತಮ್ಮ ಜಾತಿ, ಉಪಜಾತಿಯನ್ನು ತಪ್ಪದೆ ನಮೂದಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೩೦-೩೫ ವರ್ಷದಿಂದ ಪರಿಶಿಷ್ಟರಿಗೆ ಒಳಮೀಸಲು ನೀಡುವಂತೆ ಆಗ್ರಹಿಸಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಸದ್ಯ ಮೀಸಲು ದೊರೆಯುತ್ತಿಲ್ಲ. ಪರಿಶಿಷ್ಟರಲ್ಲೇ ಪ್ರಬಲ ಸಮುದಾಯಗಳು ಹೆಚ್ಚಿನ ಪಾಲು ಪಡೆಯುತ್ತಿವೆ. ಈ ಕಾರಣಕ್ಕಾಗಿ ಆಯಾ ಪರಿಶಿಷ್ಟ ಜಾತಿಯ ಜನ ತಮ್ಮಉಪಜಾತಿಯನ್ನು ಜಾತಿಯ ಕಲಂನಲ್ಲಿ ನಮೂದಿಸಬೇಕು. ಮಾದಿಗರು ಕೂಡ ೦೬೧ ರ ಕಲಂನಲ್ಲಿ ಮಾದಿಗ ಎಂದೇ ಬರೆಯಿಸಬೇಕು ಎಂದು ತಿಳಿಸಿದರು.
ಒಳ ಮೀಸಲು ನೀಡುವ ಬಗ್ಗೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಪ್ರಸ್ತಾಪ ಬಂದಿತ್ತು. ಆಂದ್ರದ ಚಂದ್ರಬಾಬು ನಾಯ್ಡು ಅವರು ಒಳಮೀಸಲು ಜಾರಿಗೆ ತಂದರು. ಇದೀಗ ಸುಪ್ರೀಂ ಕೋರ್ಟ್, ಒಳ ಮೀಸಲು ತರಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಆಂದ್ರ, ತೆಲಂಗಾಣ, ಹರಿಯಾಣ ಒಳಮೀಸಲು ಜಾರಿಗೆ ತಂದಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮಾತ್ರ ಜಾತಿಯ ಗೊಂದಲವಿದೆ. ಈ ಕಾರಣಕ್ಕಾಗಿ ನ್ಯಾ. ನಾಗಮೋಹನದಾಸ್ ನೇತೃತ್ವದ ಒಂದು ಸಮಿತಿ ರಚಿಸಿ ಆ ಮೂಲಕ ರಾಜ್ಯದಲ್ಲಿರುವ ಪರಿಶಿಷ್ಟರ ಸಮೀಕ್ಷೆ ನಡೆಸಲಾಗುತ್ತಿದೆ. ಈ ಕಾರ್ಯ ಮೇ.೧೭ ರವರೆಗೆ ನಡೆಯಲಿದ್ದು, ಅಧಿ ಮುಂದುವರಿಯುವ ಸಾಧ್ಯತೆ ಇದೆ. ಕಳೆದ ೩೫ ವರ್ಷ ನಡೆಸಿದ ಹೋರಾಟ ಫಲಪ್ರದವಾಗಬೇಕಾದರೆ ಪರಿಶಿಷ್ಟ ಜಾತಿಯ ಆಯಾ ಸಮುದಾಯದ ಜನ ತಮ್ಮ ಜಾತಿಯನ್ನು ನಿಖರವಾಗಿ ಹೇಳಿ ಬರೆಯಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ಪರಿಶಿಷ್ಟ ಸಮುದಾಯದ ಮುಖಂಡರು ಕೂಡ ಹಳ್ಳಿಗಳಲ್ಲಿ ಹೋಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ೧೦೧ ಪರಿಶಿಷ್ಟ ಸಮುದಾಯದ ಜನ ಜಾತಿ ಗಣತಿ ವೇಳೆ ತಮ್ಮ ಜಾತಿಯ ಹೆಸರನ್ನು ಬರೆಯಿಸಿದಲ್ಲಿ ಮುಂದೆ ಸರಕಾರದದಿಂದ ಸಿಗುವ ಸೌಲಭ್ಯಗಳನ್ನು ಜನಸಂಖ್ಯೆಗನುಗುಣವಾಗಿ ಪಡೆಯಬಹುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶಸ್ವಾಮಿ, ಚಂದ್ರಣ್ಣ, ಚಂದ್ರಶೇಖರ, ತಿಪ್ಪೇಶಪ್ಪ, ಕುಸುಮ ಮತ್ತಿತರರಿದ್ದರು.
Scheduled Castes should enter their sub-caste in the census.
Leave a comment