ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.
ಬಾಳೆಹೊನ್ನೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಫಲವಾಗಿ ಕರ್ನಾಟಕದಲ್ಲಿ 6395 ಆನೆಗಳಿದ್ದು. ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಹುಲಿಯ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವುದರಿಂದ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದ್ದು ಇದರ ನಿಯಂತ್ರಣಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದರು.
ಆನೆಗಳು ನಾಡಿಗೆ ಬರುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್, ಕಂದಕ, ಸೌರ ಬೇಲಿ ಹಾಕಲಾಗುತ್ತಿದೆ. ತುರ್ತು ಸ್ಪಂದನ ಪಡೆ, ಆನೆ ಕಾರ್ಯಪಡೆಯನ್ನು ರಚಿಸಿದ್ದು, ಜನರಿಗೆ ಆನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇದರ ಜೊತೆಗೆ 2 ಸಾವಿರ ಹೆಕ್ಟೇರ್ ಕಾನನ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದರು. ಈ ಭೂಮಿಯಲ್ಲಿ ಮನುಷ್ಯನಿಗೆ ಬದುಕಲು ಹೇಗೆ ಹಕ್ಕಿದೆಯೋ ಅದೇ ರೀತಿ ಎಲ್ಲ ಜೀವಜಂತುಗಳಿಗೂ ಬದುಕುವ ಹಕ್ಕಿದೆ. ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ಈ ಹೊತ್ತಿನ ಅಗತ್ಯವಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲು ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಬಸವಣ್ಣನವರ ತತ್ವದಡಿ ನಡೆಯುತ್ತಿರುವುದು ನಮ್ಮ ಸರ್ಕಾರ. ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲು ಕೇಳುವ ಹಕ್ಕಿದೆ ಎಂದರು.
ಸರ್ಕಾರ ಶಾಶ್ವತ ಹಿಂದುಳಿದವರ್ಗಗಳ ಆಯೋಗವನ್ನು ಸಾಂವಿಧಾನಿಕವಾಗಿ ರಚಿಸಿದ್ದು, ಅದು ಅಧ್ಯಯನ ಮಾಡಿ ವರದಿ ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಈ ಬಗ್ಗೆ ಪರಾಮರ್ಶಿಸಿ, ಯಾವುದೆ ಜಾತಿಯ ಜನರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
Leave a comment