ಚಿಕ್ಕಮಗಳೂರು : ಮೂಲತಃ ಕನ್ನಡಿಗರೇ ಆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯನ್ನ ಕೊಡುಗೆಯಾಗಿ ನೀಡಿದ್ದಾರೆ. ಬಾಳೆಹೊನ್ನೂರಿನ ಭದ್ರಾನದಿ ತಟದಲ್ಲಿರುವ ರಂಭಾಪುರಿ ಮಠಕ್ಕೆ ಜೀವಂತ ಆನೆಯನ್ನು ನಾಚಿಸುವಂತಹಾ ರೋಬೋಟಿಕ್ ಆನೆಯನ್ನ ಕೊಡುಗೆಯಾಗಿ ನೀಡಿದ್ದಾರೆ. ಈ ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀಗಳಾದ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸುವ ಮೂಲಕ ಮಠಕ್ಕೆ ಸ್ವಾಗತಿಸಿಕೊಂಡಿದ್ದಾರೆ.
ನೋಡಲು ಥೇಟ್ ನಿಜವಾದ ಆನೆಯಂತೆ ಕಾಣುವ ಈ ರೋಬೋಟಿಕ್ ಎಲಿಫೆಂಟ್ ಸದಾ ಮಠದ ಆವರಣದಲ್ಲೇ ಇದ್ದು ಭಕ್ತರನ್ನ ಆಶೀರ್ವದಿಸಲಿದೆ. ಈ ರೋಬೋಟಿಕ್ ಆನೆ ಸದಾ ಕಣ್ಣು ಬಿಟ್ಟು, ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಳುಗಾಡಿಸುತ್ತಿರವ ಆನೆಯನ್ನ ನೋಡಿದರೆ ನಿಜವಾದ ಆನೆ ಕೂಡ ಒಂದು ಕ್ಷಣ ವಿಚಲಿತಗೊಳ್ಳಲಿದ್ದು, ನೋಡಿದ ಕೂಡಲೇ ನಿಜವಾದ ಆನೆ ಎಂದೇ ಭಾಸವಾಗುವಂತಿದೆ. ನಟಿ ಶಿಲ್ಪಾಶೆಟ್ಟಿ ಅವರು ಮಠಕ್ಕೆ ನಿಜವಾದ ಆನೆಯನ್ನೇ ಕೊಡುಗೆಯಾಗಿ ಕೊಡುವವರಿದ್ದರು. ಆದರೆ, ಸರ್ಕಾರದ ಕಾನೂನಿನಡಿ ಕಾನೂನಿನ ತೊಡಕಾಗಬಹುದು ಎಂದು ಕಾಡಿನ ಆನೆಯನ್ನ ಹೋಲುವ ರೋಬೋಟಿಕ್ ಆನೆಯನ್ನ ಕೊಡುಗೆಯಾಗಿ ನೀಡಿದ್ದಾರೆ. ಈ ಆನೆ ಭಕ್ತರಿಗೆ ಆಶೀರ್ವಾದ ಕೂಡ ಮಾಡಲಿದೆ. ರಂಭಾಪುರಿ ಶ್ರೀಗಳು ಈ ರೋಬೋಟಿಕ್ ಆನೆಯನ್ನ ಉದ್ಘಾಟಿಸಿದ ಕೂಡಲೇ ಮಠಕ್ಕೆ ಬಂದಿದ್ದ ನೂರಾರು ಭಕ್ತರು ಆನೆಯ ಆಶೀರ್ವಾದ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.
Leave a comment