ಚಿಕ್ಕಮಗಳೂರು : ಬೀಟಮ್ಮ ಕಾಡಾನೆಗಳ ಗ್ಯಾಂಗ್ ಅನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ನಾಳೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ನಗರದ ತಾಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾಡಾನೆಗಳಿಂದ ಇಷ್ಟೊಂದು ಹಾನಿ ಸಂಭವಿಸಿದ್ದರೂ ಇದುವರೆಗೂ ಜಿಲ್ಲಾಧಿಕಾರಿ ರೈತರ ಜೊತೆಯಾಗಲಿ ಸಂತ್ರಸ್ತರ ಜೊತೆಯಾಗಲಿ ಯಾವುದೇ ಸಭೆಯನ್ನು ಕರೆದಿಲ್ಲ ಕನಿಷ್ಟ ಸಮಸ್ಯೆ ಕೇಳಿಲ್ಲ ಎಂದು ಆರೋಪಿಸಿರುವ ಗುರುಶಾಂತಪ್ಪ ಇದುವರೆಗೂ ಆನೆ ದಾಳಿಯಿಂದ ನಷ್ಟ ಉಂಟಾದವರೆಗೆ 9 ಕೋಟಿ ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ ಆದರೆ ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಅವರು ಮಳಲೂರು, ದಂಬದಹಳ್ಳಿ ಬಿಗ್ಗನಹಳ್ಳಿ ತಗಡೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕಾಫಿ ಭತ್ತ ಶುಂಠಿ ಜೋಳದ ಬೆಳೆಗಳು ನಾಶ ವಾಗಿದ್ದು ಕೇವಲ ದಯಾ ಪರಿಹಾರ ಕೊಟ್ಟರೆ ಸಾಲದು ಬದಲಾಗಿ ಈಗ ಕೊಡುತ್ತಿರುವುದಕ್ಕೆ ದುಪ್ಪಟ್ಟು ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
Leave a comment