ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲೆನಾಡು ಭಾಗಕ್ಕೆ ಬೀಟಮ್ಮ ಮತ್ತು ಆನೆಗಳ ತಂಡ ಲಗ್ಗೆ ಇಟ್ಟಿರುವುದು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಬಾರಿ ಆತಂಕಕ್ಕೆ ಕಾರಣವಾಗಿದೆ. ಕಾಫಿ ತೋಟ ಸೇರಿದಂತೆ ಕೃಷಿ ಜಮೀನುಗಳ ಮೇಲೆ ದಾಳಿ ಮಾಡುತ್ತಿರುವ ಆನೆಗಳ ಗುಂಪು ಕಾಫಿ ತೋಟದ ಮಾಲೀಕರು ಕಂಗಾಲಾಗುವಂತೆ ಮಾಡಿದೆ.
ಕಳೆದ ಆರು ಏಳು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ತೋಟಗಳನ್ನು ಮಾಡುವ ಮೂಲಕ ರೈತರು ಹಾಗೂ ಕಾಫಿ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ಜಿಲ್ಲೆಗೆ ಬೀಟಮ್ಮ ಮತ್ತು ಆನೆಗಳ ತಂಡ ಆಗಮಿಸಿರುವುದರಿಂದ ಭಯಗೊಳ್ಳುವಂತೆ ಆಗಿದೆ.
ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಲೀಲಾ ಜಾಲವಾಗಿ ಕಾಫಿ ತೋಟಗಳಿಗೆ ನುಗ್ಗಿ ದಾಳಿ ಮಾಡುತ್ತಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶಕ್ಕೆ ಕಾರಣವಾಗಿದೆ.
ಆನೆಗಳು ಕಾಫಿ ತೋಟಕ್ಕೆ ನುಗ್ಗಿದ ಪರಿಣಾಮ ಆತಂಕಗೊಂಡಿರುವ ಕಾಫಿ ಕಾರ್ಮಿಕರು ತೋಟದ ರಸ್ತೆಯಲ್ಲಿ ಕಾಫಿ ಬೀಜಗಳನ್ನು ಚೆಲ್ಲಾಡಿಕೊಂಡು ಓಡಿ ಹೋಗಿರುವ ಘಟನೆಯೂ ಸಂಭವಿಸಿದೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಆಲ್ದೂರು ವ್ಯಾಪ್ತಿಯ ಹತ್ತಾರು ಗ್ರಾಮಗಳ ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.
Leave a comment