ಚಿಕ್ಕಮಗಳೂರು : ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಅನುಮತಿ ನೀಡದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನಾರ್ಥಕವಾಗಿ ಮಹಿಷಾಸುರನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸರ್ಕಾರದ ನಿಲುವನ್ನು ಖಂಡಿಸಲಾಯಿತು.
ಜಿಲ್ಲಾಧಿಕಾರಿ ಅನುಮತಿ ನಿರಾಕರಣೆ ಮಧ್ಯೆಯೂ ವಿವಿಧ ದಲಿತ ಪರ ಸಂಘಟನೆಗಳು ಮಹಿಷಾಸುರನ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಹಿಷ ದಸರಾ ಆಚರಣೆಗೆ ಅಥವಾ ಯಾವುದೇ ಚಟುವಟಿಕೆಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅನುಮತಿ ಕೊಟ್ಟಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ದಲಿತ ಸಂಘಟನೆಯ ಇಬ್ಬರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದರು. ಆದರೆ, ಇಂದು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ 25ಕ್ಕೂ ಹೆಚ್ಚು ದಲಿತ ಮುಖಂಡರು ಮಹಿಷಾಸುರನ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿ ಜೈಕಾರ ಕೂಗಿದರು. ಮಹಿಷ ರಾಜನಿಂದಲೇ ಮೈಸೂರಿಗೆ ಮೈಸೂರು ಅಂತ ಹೆಸರು ಬಂದಿದ್ದು. ಆತ ಬೌದ್ಧ ಧರ್ಮದ ಪ್ರಚಾರಕನಾಗಿದ್ದ, ಆದಿವಾಸಿ ಮಹಾರಾಜನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ಖಂಡನಿಯ. ಖಾದಿ-ಕಾವಿ ಹಾಗೂ ಕಿಡಿಗೇಡಿಗಳಿಂದ ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಆಚರಣೆಯನ್ನು ಪ್ರತಿ ವರ್ಷವೂ ಮಾಡೇ ತೀರುತ್ತೇವೆ ತಡೆಯಲು ಯಾರಿಂದ ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದರು. ಆದರೆ, ನಾವು ಅವರಿಗೆ ಮನವಿ ಮಾಡಿದ್ದೇವು. ಯಾವುದೇ ಕಾರಣಕ್ಕೂ ಮಹಿಷ ಆಚರಣೆ ತಡೆಯಲು ಸಾಧ್ಯವಿಲ್ಲ ಎಂದು ದಲಿತ ಮುಖಂಡರು ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿದ್ರು. ಇದೇ ವೇಳೆ, ಮುನ್ನೆಚ್ಚರಿ ಕಾರ್ಯಕ್ರಮವಾಗಿ 25ಕ್ಕೂ ಹೆಚ್ಚು ಸಬ್ ಇನ್ಸ್ಪೆಕ್ಟರ್ ಸೇರಿ ನೂರಕ್ಕೂ ಹೆಚ್ಚು ಪೊಲೀಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
Leave a comment