ಚಿಕ್ಕಮಗಳೂರು :
ಕಡೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದ ಮಗುವಿನ ಅಸಲಿಯತ್ತು ಏನು ಎಂಬುದೇ ಇದೀಗ ಬೆಳಕಿಗೆ ಬಂದಿದೆ. ಕೊನೆಗೂ ಪೋಷಕರ ಬೇಜವಾಬ್ದಾರಿಗೆ ಪೊಲೀಸರು ಪಾಠ ಹೇಳಿ ಕಳುಹಿಸಿದ್ದಾರೆ.
ರಸ್ತೆಯಲ್ಲಿ ನಿಂತು ಅಳುತ್ತಿದ್ದ ಮಗುವನ್ನು ಸಂತೈಸಿ, ರಕ್ಷಣೆ ಮಾಡಿ ಮನೆಗೆ ಕರೆದೊಯ್ದಿದ್ದ ಮಹಿಳೆಯ ಕೆಲಸಕ್ಕೆ ಸಾರ್ವಜನಿಕರು ಹಾಗೂ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ ಕಡೂರು ಪಟ್ಟಣದ ಪುರಸಭೆ ಬಳಿ ಮಗು ಮಲಗಿದೆ ಎಂದು ತಂದೆ ಮಗುವನ್ನ ಟಾಟಾ ಏಸ್ ಲಗೇಜ್ ಆಟೋದಲ್ಲಿಯೇ ಬಿಟ್ಟು ಎಲ್ಲೋ ಹೋಗಿದ್ದರು. ಆದರೆ, ನಿದ್ದೆಯಿಂದ ಎದ್ದ ಮಗು ಗಾಡಿಯಿಂದ ಕೆಳಗಿಳಿದು ಅಪ್ಪ ಕಾಣದನ್ನ ನೋಡಿ ಗಾಡಿಯಿಂದ ಕೆಳಗೆ ಇಳಿದು ರಸ್ತೆಯಲ್ಲಿ ನಿಂತು ಅಳುತಿತ್ತು. ಮಗು ರಸ್ತೆಯಲ್ಲಿ ನಿಂತು ಅಳುವುದನ್ನು ಗಮನಿಸಿದ ಮಹಿಳೆ ಮಗುವನ್ನ ಎತ್ತಿಕೊಂಡು ಸಂತೈಸಿದ್ದಳು.
ರಸ್ತೆ ಬದಿಯ ಅಕ್ಕ ಪಕ್ಕದ ಅಂಗಡಿಗಳ ಬಳಿಯು ಮಗು ಯಾರದ್ದು ಎಂದು ವಿಚಾರಿಸಿದ್ದಳು. ಆದರೆ, ಎಲ್ಲರೂ ಗೊತ್ತಿಲ್ಲ ಎಂದ ಕಾರಣ ಅಳುತ್ತಿದ್ದ ಮಗುವನ್ನ ತಾನೇ ಮನೆಗೆ ಕರೆದೊಯ್ದಿದ್ದಳು. ಮಗು ಅಪಹರಣವಾಗಿದೆ ಎಂದು ಪೊಲೀಸರು, ಸ್ಥಳಿಯರು ಹಾಗೂ ಮಗುವಿನ ಪೋಷಕರು ಮಗುವಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ, ಇಂದು ಮಗು ಅಪಹರಣದ ಸುದ್ದಿ ತಿಳಿದು ಮಗುವನ್ನ ರಕ್ಷಿಸಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಟ್ಟತಾವರೆಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ದಂಪತಿಗಳು ಇಂದು ಮಗುವನ್ನ ತರೀಕೆರೆ ಠಾಣೆಗೆ ತಂದು ಒಪ್ಪಿಸಿದ್ದಾರೆ. ಮಗು ರಸ್ತೆಯಲ್ಲಿ ಅಳುತ್ತಿತ್ತು. ಯಾರನ್ನ ಕೇಳಿದರೂ ನಮದ್ದಲ್ಲ ಎಂದರು. ಅದಕ್ಕೆ ಗೊತ್ತಾದ ಮೇಲೆ ತಂದು ಕೊಡಲು ನಾನೇ ಕರೆದುಕೊಂಡು ಬಂದಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಮಗುವನ್ನ ರಕ್ಷಿಸಿದ ಮಹಿಳೆಗೆ ತರೀಕೆರೆ ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಮಗುವಿನ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಮಗುವಿನ ಬಗ್ಗೆ ಪೋಷಕರಿಗಿದ್ದ ಬೇಜವಾಬ್ದಾರಿಗೆ ಪೊಲೀಸರು ಪೋಷಕರಿಗೆ ಬುದ್ಧಿವಾದ ಹೇಳಿ ಮಗುವನ್ನ ಪೋಷಕರ ಮಡಿಲಿಗೆ ಹಾಕಿದ್ದಾರೆ.
Leave a comment