ಚಿಕ್ಕಮಗಳೂರು : ಪಡಿತರಕ್ಕಾಗಿ ಮಲೆನಾಡಿನ ಹಲವು ಕುಗ್ರಾಮಗಳಲ್ಲಿ ಆಹಾರ ಇಲಾಖೆಯ ಸಾಫ್ಟ್ ವೇರ್ ಬದಲಾವಣೆಯಿಂದಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಫ್ಟ್ ವೇರ್ ಬದಲಾವಣೆ ಹಾಗೂ ನೆಟ್ವರ್ಕ್ ಸಮಸ್ಯೆಯಿಂದಾಗಿ ಪಡಿತರಕ್ಕಾಗಿ ಎರಡರಿಂದ ಮೂರು ದಿನ ಕಾದು ಕಾದು ಸುಸ್ತಾಗಿ ಮನೆಗೆ ವಾಪಸ್ ತೆರಳುತ್ತಿರುವ ಘಟನೆ ಕೆಲವೆಡೆ ಸಾಮಾನ್ಯವಾಗಿದೆ.
ಕಳಸ ತಾಲೂಕಿನ ಕಾರ್ಗದ್ದೆ, ಮಮ್ಮಳ್ಳಿ, ಮುಜೇಖಾನ್, ಮರಸಣಿಗೆ, ಬಸರಿಕಟ್ಟೆ ಸೇರಿದಂತೆ ಕಳಸ,ಮೂಡಿಗೆರೆ, ಶೃಂಗೇರಿ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಪಡಿತರ ಪಡೆಯಲು ಫಲಾನುಭವಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಮ್ಮೆ ಪಡಿತರ ಪಡೆಯಲು 15ರಿಂದ 20 ಕಿ.ಮೀ ದೂರದಿಂದ ಕಾಡಂಚಿನ ಗ್ರಾಮದ ಜನರು ಬಂದು ಕಾದು ಕಾದು ಸುಸ್ತಾಗಿ ಇತ್ತ ಪಡಿತರವೂ ಇಲ್ಲದೆ, ಅತ್ತ ಕೂಲಿಯೂ ಸಿಗದೆ ಸಂಕಟ ಪಡುವಂತಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೂ ಕಾದು ಹೋಗುವ ಹಳ್ಳಿಗರು ಮರು ದಿನ ಮತ್ತೆ ಬೆಳಗ್ಗಿನಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿಯು ನಿರ್ಮಾಣವಾಗಿದೆ.
ಜೊತೆಗೆ ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿಗಳಲ್ಲಿ ರಸ್ತೆ ಸಂಪರ್ಕವಿಲ್ಲದ ಹಲವು ಗ್ರಾಮಗಳ ಜನರು ವಾಹನ ಸೌಲಭ್ಯವಿಲ್ಲದೆ ಪಡಿತರವನ್ನು ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಜೊತೆಗೆ ನಿಗದಿತ ಸಮಯಕ್ಕೆ ಪಡಿತರ ಸಿಗದೆ ಸಮಯ ವ್ಯರ್ಥವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೆಟ್ವರ್ಕ್ ಸಮಸ್ಯೆ ಜೊತೆಗೆ ಆಹಾರ ಇಲಾಖೆಯ ಸಾಫ್ಟ್ ವೇರ್ ನಲ್ಲಿ ಉಂಟಾಗಿರುವ ದೋಷಗಳನ್ನು ಸರಿಪಡಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
Leave a comment