ಚಿಕ್ಕಮಗಳೂರು :
ಭಯಂಕರ ಗುಡುಗು-ಸಿಡಿಲಿನ ಧಾರಾಕಾರ ಮಳೆಗೆ ಹೊಲದಲ್ಲಿ ಮೇಯುತ್ತಿದ್ದ ಹಸು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಕರ್ತಿಕೆರೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರ ಸೇರಿದಂತೆ
ಮಲೆನಾಡ ಕೆಲ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ ಹಾಗೂ ಮೂಡಿಗೆರೆಯ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿದ್ದ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವುದರ ಜೊತೆ ಜನ ಹೈರಾಣಾಗಿದ್ದಾರೆ. ಮಳೆಗಾಲದ ಮಳೆಯಂತೆ ಮನಸ್ಸೋಇಚ್ಛೆ ಸುರಿದ ಮಳೆಯಿಂದ ಅಡಿಕೆ-ಕಾಫಿ-ಮೆಣಸು ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ-ಅಡಿಕೆ-ಮೆಣಸು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು. ಈ ಬೆಳೆಗಳಿಂದಲೇ ಬದುಕು ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳು ಜಿಲ್ಲೆಯಲ್ಲಿವೆ. ಆದರೆ, ಈ ವರ್ಷ ಜನವರಿಯಿಂದಲೂ ನಿರಂತರವಾಗಿ ಮಳೆ ಸುರಿದಿದೆ. ಮಲೆನಾಡಿನಲ್ಲಿ ಮುಂಗಾರು ಮಳೆ ಯತೇಚ್ಛವಾಗಿ ಸುರಿದಿತ್ತು. ಇದೀಗ, ಹಿಂಗಾರು ಕೂಡ ಒಂದೇ ಸಮನೆ ಸುರಿಯುತ್ತಿದ್ದು ಅಡಿಕೆ-ಕಾಫಿ-ಮೆಣಸಿಗೆ ಕೊಳೆ ರೋಗದ ಭೀತಿ ಆವರಿಸಿದೆ. ಸಾಲದಕ್ಕೆ ಕಾಫಿ-ಅಡಿಕೆ-ಮೆಣಸು ಕೊಯ್ಲಿಗೆ ಬಂದಿದೆ. ಇಂತಹಾ ಸಮಯದಲ್ಲಿನ ಈ ಭಾರೀ ಮಳೆ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತೆ ಅನ್ನೋದು ಮಲೆನಾಡಿಗರ ಆತಂಕ.
Leave a comment