ಚಿಕ್ಕಮಗಳೂರು: ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಬಹುತೇಕ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬೆರಿದಿದ್ದಾನೆ. ಅಕ್ಟೋಬರ್ ತಿಂಗಳ ಆಲಿಕಲ್ಲು ಮಳೆಗೆ ಮಲೆನಾಡಿಗರು ಹೈರಾಣಾಗಿದ್ದು, ಧಾರಾಕಾರ ಮಳೆಯಿಂದಾಗಿ ಎನ್.ಆರ್. ಪುರ ತಾಲೂಕಿನ ಮಹಲ್ಗೋಡು ಸೇತುವೆ ಮೇಲೆ 2 ಅಡಿ ಎತ್ತರದಲ್ಲಿ ನೀರು ಹರಿದರೆ, ಚಾರ್ಮಾಡಿ ಘಾಟಿಯಲ್ಲು ಧಾರಾಕಾರ ಮಳೆ ಸುರಿದಿದೆ.
ಕಾಫಿ ಹಣ್ಣಾಗುವ ಸಮಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲೆನಾಡ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಮಲೆನಾಡು ಅಕ್ಷರಶಃ ಜಲಾವೃತಗೊಂಡಿದೆ. ಭಾರೀ ಮಳೆಯಿಂದ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವ ಜಲಾವೃತಗೊಂಡಿದ್ದು ಬಾಳೆಹೊನ್ನೂರು- ಕಳಸ ರಾಜ್ಯ ಹೆದ್ದಾರಿ ಸಂಪೂರ್ಣ ಬಂದಾಗಿತ್ತು.
ಮಹಲ್ಗೋಡು ಸೇತುವೆ ಮೇಲೆ 2 ಅಡಿ ಎತ್ತರಕ್ಕೆ ನೀರು ಹರಿದ ಪರಿಣಾಮ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ರಸ್ತೆ ಕೂಡ ಬಂದ್ ಆಗಿತ್ತು. ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಆಲಿಕಲ್ಲು ಮಳೆ ಕಂಡು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.
ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿದಿದ್ದು ಭಾರಿ ಮಳೆಯಿಂದ ಸಂಚರಿಸಲಾಗದೆ ವಾಹನಗಳು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮುಂಗಾರು ಮಳೆ ಮುಗಿಯುವ ವೇಳೆ ಈ ರೀತಿಯ ಅಬ್ಬರದ ಮಳೆ ಕಂಡು ಮಲೆನಾಡಿಗರು ಹಿಂಗಾರು ಮಳೆ ಮತ್ತ್ಯಾವ ರೀತಿಯ ಅನಾಹುತ ಸೃಷ್ಟಿಸುತ್ತೋ ಅನ್ನೋ ಆತಂಕದಲ್ಲಿ ಬದುಕುವಂತಾಗಿದೆ.
ಅಕ್ಟೋಬರ್ ತಿಂಗಳ ಈ ಮಳೆ ಮಲೆನಾಡಿಗರಿಗೆ ಆತಂಕ ತಂದೊಡ್ಡಿದೆ. ಮಲೆನಾಡಲ್ಲಿ ಈ ವೇಳೆ ಮಳೆ ಬರುವುದು ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಕ್ಟೋಬರ್- ನವಂಬರ್ ತಿಂಗಳಲ್ಲಿ ಕಾಫಿ ಹಣ್ಣಾದರೆ ನವಂಬರ್ 2ನೇ ವಾರದಿಂದ ಡಿಸೆಂಬರ್ ವರೆಗೂ ಕಾಫಿ ಹಣ್ಣನ್ನು ಕೊಯ್ಯುವ ಸಮಯ. ಇಂತಹಾ ಕಾಫಿ ಹಣ್ಣಾಗುವ ಸಮಯದಲ್ಲಿ ಈ ರೀತಿಯ ಧಾರಾಕಾರ ಮಳೆ ಸುರಿದರೆ ಕಾಫಿ ಹಣ್ಣು ನೆಲಕ್ಕೆ ಉದುರಲಿದೆ ಅನ್ನೋ ಭಯ ಮಲೆನಾಡಿಗರದ್ದು. ಮಲೆನಾಡಲ್ಲಿ ಸರಿಸುಮಾರು 1 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಅರೇಬಿಕಾ ಹಾಗೂ ರೊಬೋಸ್ಟಾ ಕಾಫಿ ಬೆಳೆದಿದ್ದಾರೆ.
ಈ ಸಮಯದ ಮಳೆ ಯಾವ ಬೆಳೆಗೂ ಒಳ್ಳೆಯದ್ದಲ್ಲ. ಆದರೆ, ಕಳೆದ ಒಂದೂವರೆ ತಿಂಗಳಿಂದ ದಿನಕ್ಕೆ ಒಂದೆರಡು ಬಾರಿ 5-10 ನಿಮಿಷಗಳ ಕಾಲ ಸುರಿಯುತ್ತಿದ್ದ ಸಾಧಾರಣ ಮಳೆ ಇಂದು ಧಾರಾಕಾರವಾಗಿ ಸುರಿದಿದ್ದು ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಆದರೆ, ಮುಂಗಾರಿನ ಅಂತ್ಯ ಹೀಗಿದ್ದರೆ, ಹಿಂಗಾರು ಮತ್ತಿನ್ಯಾವ ಅನಾಹುತ ಸೃಷ್ಟಿಸುತ್ತೋ ಅನ್ನೋ ಭಯ ಮಲೆನಾಡಿಗರದ್ದು.
Leave a comment