ಕಡೂರು: ಕಡೂರು ಮಾರ್ಗವಾಗಿ ಯಶವಂತಪುರಕ್ಕೆ ತೆರಳುತ್ತಿದ್ದ ಟಾಟಾ ನಗರ್ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಬಿಹಾರ ಮೂಲದ ವ್ಯಕ್ತಿಯಿಂದ 5.5 ಕೆ.ಜಿಯಷ್ಟು ಗಾಂಜಾವನ್ನು ರೈಲ್ವೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಶನಿವಾರ ವಶಪಡಿಸಿಕೊಂಡಿದೆ.
ಬಿಹಾರ ರಾಜ್ಯದ ಜಮುಯ್ ಜಿಲ್ಲೆಯ ಸೋನಾ ಗ್ರಾಮದ ಮಹೇಂದ್ರ ದಾಸ್ ಬಂಧಿತ ಆರೋಪಿ. ಈತ ಟಾಟಾ ನಗರ ರೈಲು ಗಾಡಿಯಲ್ಲಿ ಬೆಡ್ ರೋಲ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ.
ಶನಿವಾರ ಸಂಜೆ ಸಂಚರಿಸುತ್ತಿದ್ದ ರೈಲಿನಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಆರೋಪಿ ಗಾಂಜಾ ಸೊಪ್ಪು ಹೊಂದಿದ ಚೀಲ ಸಾಗಿಸುತ್ತಿದ್ದದ್ದು ಕಂಡುಬಂದ ಹಿನ್ನೆಲೆಯಲ್ಲಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಮಹೇಂದ್ರನನ್ನು ಬಂಧಿಸಿ, ₹3.3ಲಕ್ಷ ಮೌಲ್ಯದ ಗಾಂಜಾ ಹಾಗೂ ಒಂದು ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ರೈಲ್ವೆ ಪೊಲೀಸ್ ಇಲಾಖೆಯ ಸಹಾಯಕ ಉಪನಿರೀಕ್ಷಕ ಬಿ.ಆನಂದ್, ಟಿ. ಶಿವಾನಂದ, ಮುಜಮ್ಮಿಲ್ ಖಾನ್, ಶಿವಮೂರ್ತಿ, ಕಡೂರು ಅಬಕಾರಿ ನಿರೀಕ್ಷಕ ಎಲ್.ಸಿ. ಸಂದೀಪ್, ಎಸ್. ಶ್ರೀಧರ್, ವಾಹನ ಚಾಲಕ ಅಶೋಕ್ ಹಾಗೂ ಸಿಬ್ಬಂದಿ ಇದ್ದರು.
5.5 kg of marijuana found in Tata Nagar Express train
Leave a comment