ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ನಗರದ ರುಕ್ಮಿಣಿಯಮ್ಮ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಖಿ ಒನ್ ಸೆಂಟರ್‌ಗೆ ಇಂದು ಭೇಟಿ ನೀಡಿದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆ ಒನ್‌ಸ್ಟಾಫ್ ಸಖಿ ಸೆಂಟರ್ ಹೊಂದಿದ್ದು,, ನಮ್ಮ ಆಯೋಗದ ದೃಷ್ಟಿಯಿಂದ ಇಂದು ತುಂಬಾ ಅಗತ್ಯವಾದುದು. ಇಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಕಲಹಗಳಿಂದ ತೊಂದರೆಗೊಳಗಾದ ಮಕ್ಕಳು, ಮಹಿಳೆಯರು, ಪೋಕ್ಸೋ, ಬಾಲ್ಯ ವಿವಾಹ ಪ್ರಕರಣಗಳಲ್ಲಿ ನೊಂದ ಎಲ್ಲ ಮಕ್ಕಳು ಪೊಲೀಸ್ ಠಾಣೆಯ ನಂತರ ಈ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಾರೆ ಎಂದರು.
ನೊಂದ ಮಕ್ಕಳು ಮತ್ತು ತಾಯಂದಿರಿಗೆ ಬೇರೆ ಬೇರೆ ಕಡೆಗಳಲ್ಲಿ ಆಶ್ರಯ ನೀಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಇಲ್ಲಿಯೇ ಏಳು ದಿನಗಳ ಕಾಲ ಆಶ್ರಯ ನೀಡಿ, ವಕೀಲರು, ವೈದ್ಯರು ಹಾಗೂ ಪೊಲೀಸರ ನೆರವು ಕಲ್ಪಿಸಲಾಗುತ್ತಿದೆ, ಇಲ್ಲಿನ ವ್ಯವಸ್ಥೆ ಉತ್ತಮವಾಗಿದ್ದು, ಈ ಕಾರ್ಯಕ್ರಮಕ್ಕೆ ನಿರ್ಭಯಾ ಯೋಜನೆಯ ಅನುದಾನ ಬಳಕೆಯಾಗುತ್ತದೆ ಎಂದು ತಿಳಿಸಿದರು.
ಪ್ರತೀ ಜಿಲ್ಲೆಗೆ ಭೇಟಿ ನೀಡಿದಾಗ ಒನ್‌ಸ್ಟಾಫ್ ಸಖಿ ಸೆಂಟರ್‌ಗೆ ಕಡ್ಡಾಯವಾಗಿ ಭೇಟಿ ನೀಡುತ್ತಿದ್ದು, ಅಲ್ಲಿ ದಾಖಲಾಗಿರುವ ವಿವಿಧ ಬಗೆಯ ಎಲ್ಲಾ ಪ್ರಕರಣಗಳ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ ಅವರು, ಈ ಜಿಲ್ಲೆಯಲ್ಲಿ ೨೦೧೯-೨೦ ರಲ್ಲಿ ೩೫ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ೨೦೨೪-೨೫ ರಲ್ಲಿ ಐದು ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ ಮೂರು ಪ್ರಕರಣಗಳು ದಾಖಲಾಗಿವೆ.
ಈ ಹಿಂದಿನ ಪ್ರಕರಣಗಳಿಗೆ ಹೋಲಿಸಿದಲ್ಲಿ ಈ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತಾ ಬಂದಿದೆ. ಈ ರೀತಿ ಪ್ರಕರಣಗಳ ತೀವ್ರತೆ ಕಡಿಮೆಯಾಗುತ್ತಾ ಬಂದಿರುವುದು ಒಂದು ವಿಶೇಷವೇ ಸರಿ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆಡಳಿತಕ್ಕೆ ಮತ್ತು ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಅಭಿನಂದಿಸುವುದಾಗಿ ಹೇಳಿದರಲ್ಲದೆ, ಮುಂದಿನ ದಿನಗಳಲ್ಲಿ ಈ ಎಲ್ಲಾ ಪ್ರಕರಣಗಳು ಶೂನ್ಯಕ್ಕೆ ಇಳಿಯಲಿ ಎಂದು ಆಶಿಸುತ್ತೇನೆ. ಆ ಸಂಬಂಧ ಜಿಲ್ಲಾಧಿಕಾರಿಗಳಿಂದ ಮಾಡಿರುವ ಎಲ್ಲಾ ಕ್ರಮಗಳ ಬಗ್ಗೆ ವರದಿ ತರಿಸಿಕೊಳ್ಳುವುದಾಗಿ ತಿಳಿಸಿದರು.
ಸಖಿ ಸೆಂಟರ್‌ನಲ್ಲಿರುವ ನೀರಿನ ತೊಟ್ಟಿ ಶುಚಿಯಾಗಿಲ್ಲದಿರುವುದು ತಮಗೆ ಬೇಸರ ತರಿಸಿತು. ಅದನ್ನು ಎರಡರಿಂದ ಮೂರು ದಿನಗಳ ಒಳಗೆ ಸ್ವಚ್ಛಗೊಳಿಸಿ ವರದಿ ಸಲ್ಲಿಸಬೇಕು. ಉಳಿದಂತೆ ಆಸ್ಪತ್ರೆಯ ವ್ಯವಸ್ಥೆ ಉತ್ತಮವಾಗಿದೆ. ಬಾಣಂತಿಯರಿಗೆ ಇರುವ ಬಿಸಿ ನೀರಿನ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕಿದೆ. ಮೂರು-ನಾಲ್ಕು ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ವರದಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮೋಹನ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸರ್ಜನ್ ಡಾ.ಚಂದ್ರಶೇಖರ್ ಸಾಲಿಮಠ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ರೋಹಿತ್, ಅಸೋಸಿಯೇಟ್ ಪ್ರೊಫೆಸರ್‌ಗಳಾದ ಡಾ.ಪಾಂಡುರಂಗಯ್ಯ ಹಾಗೂ ಡಾ.ಕೋನಪ್ಪ ಮತ್ತು ಸಿಬ್ಬಂದಿ ಹಾಜರಿದ್ದರು.
Women’s Commission Chairperson visits Children’s Hospital-Sakhi Center
Leave a comment