ಮೂಡಿಗೆರೆ: ಗೋಣಿಬೀಡು ಹೋಬಳಿಯ ಕಮ್ಮರಗೋಡು ಗ್ರಾಮಕ್ಕೆ ಭಾನುವಾರ ಬೆಳಿಗ್ಗೆ ಬಂದಿದ್ದ ಕಾಡಾನೆಯೊಂದು ಕೃಷಿಹೊಂಡಕ್ಕೆ ಇಳಿದು ಅರ್ಧ ಗಂಟೆಗೂ ಹೆಚ್ಚು ಕಾಲ ನೀರಾಟವಾಡಿದೆ.
ಗೋಣಿಬೀಡು ಹೋಬಳಿಯಲ್ಲಿ ಒಂದೂವರೆ ತಿಂಗಳಿನಿಂದಲೂ ಬೀಡುಬಿಟ್ಟಿರುವ ಒಂಟಿ ಕಾಡಾನೆಯು ಕೆಲ ದಿನಗಳ ಹಿಂದೆ ಮನೆಯೊಳಗೆ ಪ್ರವೇಶಿಸುವ ಯತ್ನ ನಡೆಸಿ ಭೀತಿಗೊಳಿಸಿತ್ತು.
ಕಾಡಾನೆ ಕೃಷಿ ಹೊಂಡಕ್ಕೆ ಇಳಿದಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ವಿಡಿಯೊ, ಫೋಟೊ ಸೆರೆ ಹಿಡಿದರೂ ಕೃಷಿ ಹೊಂಡದಿಂದ ಕಾಡಾನೆ ಮೇಲೆ ಬರಲಿಲ್ಲ. ಬಳಿಕ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಕೃಷಿ ಹೊಂಡದಿಂದ ಓಡಿಸಿದ್ದು, ಪಕ್ಕದಲ್ಲಿರುವ ಅರಣ್ಯ ಪ್ರದೇಶ ಸೇರಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಒಂಟಿ ಕಾಡಾನೆ ಆತಂಕ: ಮಾಕೋನಹಳ್ಳಿ, ನಂದೀಪುರ, ಗೋಣಿಬೀಡು ಗ್ರಾ.ಪಂಗಳ ಸುತ್ತಮುತ್ತಲ ಪ್ರದೇಶಗಳಲ್ಲಿಯೇ ಒಂದೂವರೆ ತಿಂಗಳಿನಿಂದ ಓಡಾಡುತ್ತಿರುವ ಕಾಡಾನೆಯು, ಇತ್ತೀಚೆಗೆ ಹಗಲಿನಲ್ಲಿಯೂ ಕಾಣಿಸಿಕೊಳ್ಳು ತ್ತಿರುವುದು ಸ್ಥಳೀಯರಿಗೆ ಆತಂಕ ಮೂಡಿಸಿದೆ.
ರಾತ್ರಿಯಾಗುತ್ತಿದ್ದಂತೆ ಮನೆಯಂಗಳಕ್ಕೆ ಬರುವ ಕಾಡಾನೆಯು ಕಾಫಿ ತೋಟ, ಮನೆಯಂಗಳದಲ್ಲಿ ಬೆಳೆದಿರುವ ಬೆಳೆಗಳನ್ನು ನಾಶ ಮಾಡುತ್ತಿದ್ದು, ಬೆಳಕು ಮೂಡಿದರೂ ಗ್ರಾಮದೊಳಗೆ ಕಾಣಿಸಿಕೊಳ್ಳುತ್ತಿದ್ದು ಜೀವ ಭಯದಿಂದಿರುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Wild elephants watering in an agricultural pond in Kammaragod village
Leave a comment