ಚಿಕ್ಕಮಗಳೂರು : ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಂಬಂಧ ಹತ್ತು ಹಲವು ಮಾಹಿತಿಗಳು ಹರಿದಾಡುತ್ತಿವೆ. ಧರ್ಮಸ್ಥಳದಲ್ಲಿ ಬಂಧಿತ ಇಬ್ಬರು ನಕ್ಸಲ್ ಸಿಂಪಥೈಸರ್ ಓಡಾಟ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿಗೆ ಕೇರಳ ನಕ್ಸಲರು ಬರೆದ ಪತ್ರ ತರಲು ಹೊರಟಿದ್ದ ಬಗ್ಗೆ ಪೊಲೀಸರಿಗೆ ಗುಮಾನಿ ಇದ್ದು ಅದರ ಜಾಡು ಹಿಡಿದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಪಶ್ಚಿಮ ವಲಯ ಐಜಿಪಿ ಖುದ್ದು ಶೃಂಗೇರಿ ಯಲ್ಲಿ ಮೊಕ್ಕಾಂ ಹೂಡಿದ್ದು ವಿಚಾರಣೆ ನೇತೃತ್ವ ವಹಿಸಿದ್ದಾರೆ.
ಪಶ್ಚಿಮ ಘಟ್ಟಗಳ ಕಾನನದಲ್ಲಿ ಕೆಂಪು ಉಗ್ರರ ಓಡಾಟದ ವದಂತಿಗೆ ಹಲವು ಮಾಹಿತಿಗಳು ಇದೀಗ ಹೊರ ಬೀಳುತ್ತಿವೆ. ನಕ್ಸಲರಿಗೆ ಬೆನ್ನೆಲುಬಾಗಿ ಇದ್ದ ಕೆಲ ಮಲೆನಾಡಿನ ನಕ್ಸಲ್ ಅನುಕಂಪಿತರು ಮಾಡಿದ ಯಡವಟ್ಟು ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ. ಕೇರಳದ ನಕ್ಸಲರು ಬರೆದ ಪತ್ರ ತರಲು ಬೆಂಗಳೂರಿಗೆ ಹೋಗಿ ಗುಟ್ಟು ಬಿಟ್ಟುಕೊಟ್ರಾ ನಕ್ಸಲ್ ಬೆಂಬಲಿಗರು ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಆ ಪತ್ರವನ್ನು ತರಲು ಹೋಗಿದ್ದರು ಇಬ್ಬರು ಯುವಕರು ಎಂದು ಗೊತ್ತಾಗಿದೆ.
ಅದು ಹಾರ್ಡ್ ಕೋರ್ ನಕ್ಸಲ್ ನಾಯಕಿಗೆ ಸೇರಿದ ಪತ್ರ ಎಂಬ ಅನುಮಾನ ಕೂಡಾ ಮನೆ ಮಾಡಿದೆ. ಪತ್ರ ತರಲು ಬೆಂಗಳೂರಿಗೆ ಹೋಗಿದ್ದ ಇಬ್ಬರು ಯುವಕರು ಲಾಕ್ ಆದ ನಂತರ ಆ ಇಬ್ಬರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೋ ಪೊಲೀಸರು ಮತ್ತಷ್ಟು ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ವೆಸ್ಟರ್ನ್ ಘಾಟ್ ನಲ್ಲಿ ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ ಕಾರ್ಯ ನಡೆಸುತ್ತಿದೆ. ಇತ್ತೀಚೆಗೆ ಈದು ಎಂಬ ಗ್ರಾಮಕ್ಕೆ 6 ಜನ ನಕ್ಸಲರು ಮನೆಯೊಂದಕ್ಕೆ ಭೇಟಿ ನೀಡಿದ್ದರು ಮನೆಯವರ ಜೊತೆ ಮಾತನಾಡಿ ಊಟ ಮಾಡಿಕೊಂಡಿ ಹೋಗಿದ್ದ ಬಗ್ಗೆ ಸಂಶಯ ಕೂಡಾ ಇತ್ತು.
ಸದ್ಯ ಕೊಪ್ಪ-ಶೃಂಗೇರಿ-ಕಳಸ ತಾಲೂಕಿನ ಕಾಡು-ಕಾಡಂಚಿನಲ್ಲಿ ತೀವ್ರ ಶೋಧ ನಡೆಯುತ್ತಿದ್ದು ಡಾಗ್ ಸ್ಕ್ವಾಡ್ ನೊಂದಿಗೆ ಮಲೆನಾಡಲ್ಲಿ ಎ.ಎನ್.ಎಫ್ ಹೈ ಅಲರ್ಟ್ ಆಗಿದೆ.
ಈ ನಡುವೆ ಶೃಂಗೇರಿಯಲ್ಲಿ ಬೀಡು ಬಿಟ್ಟಿರುವ ಎ.ಎನ್.ಎಫ್. ಎಸ್ಪಿ, ಚಿಕ್ಕಮಗಳೂರು ಎಸ್ಪಿ ಹಾಗೂ ಪಶ್ಚಿಮ ವಲಯ ಐಜಿಪಿ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ.
Leave a comment