ಚಿಕ್ಕಮಗಳೂರು: ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಯನ್ನು ಸರಿಪಡಿಸಿ, ಬಡವರಿಗೆ ನಿವೇಶನ ಮತ್ತು ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಸಮಾಲೋಚಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭೂಮಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ ರಚಿಸಲಾಗಿದ್ದು, ಅದರ ನೇತೃತ್ವದಲ್ಲಿ ಮುಂದೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಹಸ್ರಾರು ಜನರು ನಿವೇಶನಕ್ಕೆ ಜಾಗವಿಲ್ಲದೆ ಕೂಲಿ ಲೈನ್‌ಗಳಲ್ಲಿ ವಾಸಿಸುತ್ತಿದ್ದಾರೆ. ಒಂದೇ ಮನೆಯಲ್ಲಿ ಮೂರ್‍ನಾಲ್ಕು ಕುಟುಂಬಗಳು ವಾಸ ಮಾಡುತ್ತಿವೆ. ಈ ವರೆಗೆ ಈ ಸಮಸ್ಯೆ ಬಗ್ಗೆ ಯಾವ ಸರ್ಕಾರವೂ ಗಮನ ಹರಿಸಿಲಿಲ್ಲ ಎಂದು ದೂರಿದರು.
ಇರುವ ಕಂದಾಯ ಭೂಮಿಯನ್ನು ಅರಣ್ಯ ಮಾಡಲು ಸರ್ಕಾರ ಹೊರಟಿದೆ. ಹುಲ್ಲುಬಂದಿ, ಸಮುದಾಯ ಅರಣ್ಯ, ಸಾಮಾಜಿಕ ಅರಣ್ಯ, ೪(೧) ಮಾಡಲು ಹೊರಟಿದೆ. ಈಗಾಗಲೆ ಮೀಸಲು ಅರಣ್ಯವನ್ನು ರಚಿಸಲಾಗಿದೆ. ಇಷ್ಟೆಲ್ಲಾ ಆದರೂ ಸರ್ಕಾರಿ ಭೂಮಿಯನ್ನು ಬ್ಯಾಂಕ್‌ಗೆ ಅಡವಿಟ್ಟು ನಿವೇಶನ ರಹಿತರಿಗೆ ಭೂಮಿ ಇಲ್ಲದಂತೆ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಲಿ ಇರುವ ೪(೧) ರದ್ದು ಪಡಿಸಿ ಅದನ್ನು ಕಂದಾಯ ಜಮೀನಾಗಿ ಪರಿವರ್ತನೆ ಮಾಡಬೇಕು. ಎಲ್ಲಾ ಬಡವರಿಗೆ ನಿವೇಶನವನ್ನು ಒದಗಿಸಬೇಕು ಎನ್ನುವುದು ನಮ್ಮ ಆಗ್ರಹವಿದೆ. ಸಣ್ಣ, ಸಣ್ಣ ರೈತರ ಬಗ್ಗೆ ನಮ್ಮ ತಕರಾರಿವುದಿಲ್ಲ ಎಂದರು.
ಈ ಹೋರಾಟದಲ್ಲಿ ಯಾವುದೇ ರೀತಿ ಜಾತಿ ವರ್ಗ ಎನ್ನುವುದು ಇರುವುದಿಲ್ಲ. ಯಾರೇ ನಿವೇಶನ, ಮನೆ ರಹಿತರು ಇದ್ದಲ್ಲಿ ಅವರಿಗೆ ಅನುಕೂಲ ಆಗಬೇಕು ಎನ್ನುವುದು ಸಮಿತಿ ಉದ್ದೇಶವಾಗಿದೆ ಎಂದರು.
ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹಂತ ಹಂತವಾಗಿ ಕಾಲ್ನಡಿಗೆ ಜಾಥಾ, ಪಂಜಿನ ಮೆರವಣಿಗೆ, ಬಂದ್ ಇನ್ನಿತರೆ ಕಾರ್ಯಕ್ರಮಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಲಿಸಿದರು.
ಈ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದರೂ ಅದು ನಿಧಾನ ಗತಿಯಲ್ಲಿದೆ. ಇದರ ನಡುವೆ ಎಸ್‌ಎಫ್‌ಓಗಳು ಹಳ್ಳಿಗಳಿಗೆ ಬಂದು ಸಮುದಾಯ ಅರಣ್ಯಗಳ ರಚನೆ ಉದ್ದೇಶದಿಂದ ದಾಖಲೆಗಳನ್ನು ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಎಸ್‌ಎಪ್‌ಓಗಳಿಗೆ ನ್ಯಾಯಾಂಗ ಸ್ಥಾನ ಮಾನ ನೀಡಲಾಗಿದೆ. ಅವರು ಸರ್ಕಾರದ ಮಾತನ್ನೇ ಕೇಳುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.
ಮುಖಂಡ ಹುಣಿಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಜಿಲ್ಲಾ ಮಟ್ಟದ ಭೂಮಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯನ್ನು ಹುಟ್ಟುಹಾಕಲಾಗಿದೆ. ಹಲವಾರು ವರ್ಷಗಳಿಂದ ವಿವಿಧ ಸಂಘಟನೆಗಳು ಈ ವಿಚಾರದಲ್ಲಿ ಹೋರಾಟ ನಡೆಸಿಕೊಂಡು ಬಂದಿವೆ. ಇಂದು ಚಿಕ್ಕಮಗಳೂರು ತಾಲ್ಲೂಕು ಆವತಿ, ಆಲ್ದೂರು, ವಸ್ತಾರೆ, ಖಾಂಡ್ಯ ಹಾಗೂ ಅಂಬಳೆ ಹೋಬಳಿ ರೈತರು, ನಿವಾಸಿಗಳ ಸಭೆ ಕರೆದು ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು
ಸಮಿತಿ ಉಪಾಧ್ಯಕ್ಷರಾಗಿ ನವರಾಜು ಸೇರಿ ನಾಲ್ಕು ಮಂದಿ ಇದ್ದಾರೆ. ಸಮಿತಿಯಲ್ಲಿ ಸುಮಾರು ೨೫ ಮಂದಿ ಪದಾಧಿಕಾರಿಗಳಿದ್ದಾರೆ. ನಿವೇಶನ ರಹಿತರಿಗೆ ಜಾತಿ, ಧರ್ಮ ಇರುವುದಿಲ್ಲ. ಅವರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಎಲ್ಲಾ ಪಕ್ಷ, ಸಂಘಟನೆಗಳ ಸಹಕಾರ ಪಡೆದು ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕಟಾರದಹಳ್ಳಿ ನವರಾಜ್, ಮಾಜಿ ಜಿ.ಪಂ. ಸದಸ್ಯ ಸತೀಶ್, ಕೃಷ್ಣಪ್ಪ, ಕಂಚೇನಹಳ್ಳಿ ಮಹೇಶ್, ಗ್ರಾ.ಪಂ. ಅಧ್ಯಕ್ಷ ರಾಮಪ್ಪ, ಅಂಬೇಡ್ಕರ್ ಹೋರಾಟ ಸಮಿತಿ, ಆಲ್ದೂರು ಅಂಬೇಡ್ಕರ್ ಸಮಿತಿ ಸದಸ್ಯತು, ಬಸವಯ್ಯ, ಕೂದುವಲ್ಳಿ ಕೃಷ್ಣಪ್ರಸಾದ್, ಬೆರಣಗೋಡು ಮಂಜು, ದಿವಾಕರ್ ಇತರರು ಭಾಗವಹಿಸಿದ್ದರು.
Violent protest if action is not taken to distribute houses
Leave a comment