ಚಿಕ್ಕಮಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತನಿಗೆ ಪ್ರಧಾನ ಸಿ.ಜೆ. ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು ಎರಡು ವರ್ಷ ಕಾರಾಗೃಹ ವಾಸ ಹಾಗೂ ೨೮,೫೦೦ ರೂ. ದಂಡ ವಿಧಿಸಿ ತೀರ್ಪಿತ್ತಿದೆ.
ಚಿಕ್ಕಮಗಳೂರು ತಾಲ್ಲೂಕು ವಸ್ತಾರೆ ಹೋಬಳಿ ಕೆಳಗಣೆ ಗ್ರಾಮದ ಕಲ್ಲೇಗೌಡ ಎಂಬುವವರ ಮಗ ಪೂರ್ಣೇಶ್ ಎಂಬವರೇ ಶಿಕ್ಷೆಗೆ ಒಳಗಾದವರು. ೨೦೨೨ರ ಏಪ್ರಿಲ್ ೭ ರಂದು ಬೆಳಿಗ್ಗೆ ೧೧.೩೦ರ ಸುಮಾರಿಗೆ ಗ್ರಾಮದ ರೇವಣ್ಣೇಗೌಡ ಹಾಗೂ ಅವರ ಮಗ ಶ್ಯಮಂತಾ ಸಾರ್ವಜನಿಕ ಹಾದಿಯಲ್ಲಿ ತೆರಳುತ್ತಿದ್ದಾಗ, ಪೂರ್ಣೇಶ್ ದಾರಿಗೆ ಅಡ್ಡಗಟ್ಟಿ ಈ ಮಾರ್ಗದಲ್ಲಿ ಏಕೆ ತೆರಳುತ್ತಿರುವಿರಿ ಎಂದು ಆಕ್ಷೇಪಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ರೇವಣ್ಣೇಗೌಡ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದರೆನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಮಗ ಶ್ಯಮಂತಾ ಅವರ ಮೇಲೂ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆಯೊಡ್ಡಿದ್ದರೆನ್ನಲಾಗಿದೆ.
ಈ ಬಗ್ಗೆ ಆರೋಪಿಯ ವಿರುದ್ಧ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಆಲ್ದೂರು ಠಾಣೆಯ ಹೆಚ್.ಸಿ. ಸತೀಶ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭ ಕೃತ್ಯ ಎಸಗಿದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ. ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಟಿ.ಅನುರಾಧ ಅವರು ಆರೋಪಿ ಪೂರ್ಣೇಶನಿಗೆ ವಿವಿಧ ಕಲಂಗಳಡಿ ಎರಡು ವರ್ಷ ಸಾದಾ ಕಾರಾಗೃಹ ಸಜೆ ಹಾಗೂ ೨೮,೫೦೦ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ.
ಪ್ರಧಾನ ಸಿ.ಜೆ. ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಕಾನೂನು ಅಧಿಕಾರಿಗಳು (ಹಿರಿಯ) ಮತ್ತು ಪ್ರಭಾರ ಸರ್ಕಾರಿ ಅಭಿಯೋಜಕ ಡಿ.ಬಿನು ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
Two years in prison for assault suspect
Leave a comment