ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ನಾಲ್ಕು ತಾಲೂಕುಗಳು ಹೊರತುಪಡಿಸಿ ಇನ್ನುಳಿದ ಐದು ತಾಲೂಕುಗಳಲ್ಲಿ ಭಾನುವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು. ಆದರೆ, ಗಾಳಿಯ ಅಬ್ಬರ ಜೋರಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿರುವುದರಿಂದ ಮನೆಯಿಂದ ಹೊರ ಹೋಗಲು ಜನರು ಆತಂಕಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಶನಿವಾರ ಇಡೀ ರಾತ್ರಿಯಿಂದ ಭಾನುವಾರ ಮುಂಜಾನೆಯವರೆಗೆ ಮಲೆನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ನದಿ ಪಾತ್ರಗಳಲ್ಲಿರುವ ತಗ್ಗಿನ ಪ್ರದೇಶಗಳಲ್ಲಿ ನೀರು ಆವರಿಸಿಕೊಂಡಿದೆ. ಶೃಂಗೇರಿ ಪಟ್ಟಣಕ್ಕೆ ಜಲ ದಿಗ್ಭಂಧನವಾಗುವ ಆತಂಕ ಎದುರಾಗಿದೆ. ಇಲ್ಲಿನ ಕುರುಬಗೇರಿ, ವಿದ್ಯಾರಣ್ಯಪುರ ರಸ್ತೆಗಳು ಜಲಾವ್ರತವಾಗಿವೆ. ಶೃಂಗೇರಿಯ ದೇಗುಲಕ್ಕೆ ಬರುವ ಭಕ್ತರು ವಾಹನಗಳು ಪಾರ್ಕಿಂಗ್ ಮಾಡುವ ಗಾಂಧಿ ಮೈದಾನವೂ ಸಹ ಜಲವ್ರತವಾಗಿದ್ದು, ರಾತ್ರಿ ಹೊತ್ತಿನಲ್ಲಿ ಕೆಲವು ಕಾರ್‌ಗಳು ನದಿ ನೀರಿನಲ್ಲಿದ್ದವು.
ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿ ಭೂ ಕುಸಿತ ಮುಂದುವರೆದಿತ್ತು. ಕೊಪ್ಪ ತಾಲೂಕಿನಲ್ಲೂ ಮಳೆ ಮುಂದುವರೆದಿದ್ದು, ನಾಗಲಾಪುರ ಗ್ರಾಮದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಸಮೀಪದ ಭತ್ತದ ಗದ್ದೆಗಳು ಜಲಾವ್ರತವಾಗಿದ್ದವು. ಹರಿಹರಪುರದ ಮಠದ ಮೆಟ್ಟಿಲು ಸಮೀಪಕ್ಕೆ ನೀರು ಬಂದಿತ್ತು. ಕಳಸ ತಾಲೂಕಿನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಹೀಗಾಗಿ ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಮೂಡಿಗೆರೆ ತಾಲೂಕಿನಲ್ಲಿ ಮಳೆ ಮುಂದುವರೆದಿದೆ. ಆದರೆ, ಚಿಕ್ಕಮಗಳೂರು ತಾಲೂಕಿನಲ್ಲಿ ಬೆಳಿಗ್ಗೆಯಿಂದಲೇ ಬಿಸಿಲಿನ ವಾತಾವರಣ ಇದ್ದು, ಮಳೆ ಬಿಡುವು ನೀಡಿತ್ತು. ಎನ್.ಆರ್.ಪುರ ತಾಲೂಕಿನಲ್ಲಿ ಮಳೆ, ಬಿಸಿಲು, ಮೋಡ ಕವಿದ ವಾತಾವರಣ ಇತ್ತು. ಆದರೆ, ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿತ್ತು.
ಜಿಲ್ಲೆಯಲ್ಲಿ ಮಳೆ ಇಳಿಮುಖವಾಗುತ್ತಿದ್ದಂತೆ ಗಾಳಿಯ ಆರ್ಭಟ ಜೋರಾಗಿದೆ. ಬಲವಾಗಿ ಗಾಳಿ ಬೀಸುತ್ತಿರುವುದರಿಂದ ವಿದ್ಯುತ್ ಕಂಬಗಳು, ಮರಗಳು ಬೀಳುತ್ತಿರುವುದರಿಂದ ಹಲವೆಡೆ ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಶೃಂಗೇರಿ, ಕೊಪ್ಪ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವೆಡೆ ಕಳೆದ 3-4 ದಿನಗಳಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಚಾರ್ಜ್ ಮಾಡಿಕೊಳ್ಳಲು ವಿದ್ಯುತ್ ಇಲ್ಲದಿರುವುದರಿಂದ ಮೊಬೈಲ್‌ಗಳು ಸಹ ಸ್ವಿಚ್ ಆಫ್ ಆಗಿವೆ.
ಕೊಪ್ಪ ತಾಲಕಿನ ಲೋಕನಾಥಪುರ ಬಳಿ ಮರವೊಂದು ಬಿದ್ದ ಪರಿಣಾಮ, ಸಮೀಪದಲ್ಲೇ ಹಾದು ಹೋಗಿರುವ ವಿದ್ಯುತ್ ಕಬ್ಬವೂ ಸಹ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಚಿಕ್ಕಮಗಳೂರು ನಗರದಿಂದ ಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿರುವ ಕೈಮರ ಚೆಕ್ ಪೋಸ್ಟ್ ಬಳಿ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದ ಕಡ್ಡಿಪುಡಿ ಎಸ್ಟೇಟ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಕೆಲ ಸಮಯ ಅಡಚಣೆಯಾಗಿತ್ತು. ಒಟ್ಟಾರೆ ಮುಂಗಾರು ಮಳೆ ಮತ್ತು ಗಾಳಿಯಿಂದಾಗಿ ಅನಾಹುತಗಳು ಹೆಚ್ಚಾಗುತ್ತಿವೆ. ಹಲವೆಡೆ ಮನೆಗಳು ಸಹ ಬೀಳುತ್ತಿವೆ.
Tunga-Bhadra and Hemavati rivers overflowing due to heavy rains in the district
Leave a comment