ಚಿಕ್ಕಮಗಳೂರು: ಮಳೆ-ಗಾಳಿ ಚಳಿ ಲೆಕ್ಕಿಸದೆ ಪ್ರತಿದಿನ ಬೆಳಗ್ಗೆ ಮನೆಮನೆಗೆ ಪತ್ರಿಕೆ ವಿತರಣೆ ಮಾಡುವ ವಿತರಕರ ಕಾರ್ಯ ಶ್ಲಾಘನೀಯ ಎಂದು ನಗರಸಭಾಧ್ಯಕ್ಷೆ ಶೀಲಾದಿನೇಶ್ ತಿಳಿಸಿದರು.
ಅವರು ಇಂದು ನಗರದ ಹನುಮಂತಪ್ಪ ಸರ್ಕಲ್‌ನ ಉಮಾರಾಮ್ ಸಂಕೀರ್ಣದ ಬಳಿ ಚಿಕ್ಕಮಗಳೂರು ನಗರ ಪತ್ರಿಕಾ ಏಜೆಂಟರು ಮತ್ತು ವಿತರಕರ ಸಂಘ ಏರ್ಪಡಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಯನ್ನು ಪ್ರತಿಯೊಬ್ಬರೂ ಕೊಂಡುಕೊಂಡು ಓದುವ ಮೂಲಕ ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ತಿಳಿದುಕೊಳ್ಳಲು ಪತ್ರಿಕಾ ವಿತರಕರ ಕಾರ್ಯ ಸಹಕಾರಿ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಪತ್ರಿಕಾ ವಿತರಕರಿಗೆ ಆಯಾ ಮಾಧ್ಯಮ ಸಂಸ್ಥೆ ರೈನ್ ಕೋಟ್ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ ಅವರು, ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ಶುಭ ಹಾರೈಸಿದರು.
ಪತ್ರಿಕಾ ವಿತರಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತಂದು ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಹೋರಾಟ ನಡೆಯುತ್ತಿದ್ದು, ಇವರ ಈ ಎಲ್ಲಾ ಬೇಡಿಕೆಗಳು ಶೀಘ್ರವೇ ಇತ್ಯರ್ಥವಾಗಲಿ ಎಂದು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ವಿಷಯಗಳು ಕ್ಷಣಿಕ ಮಾತ್ರವಾಗಿದ್ದು, ಮುದ್ರಣ ಮಾದ್ಯಮದ ಪತ್ರಿಕೆಗಳು ಪ್ರಕಟ ಮಾಡುವ ಸುದ್ದಿಗಳು ಸದಾ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ ಎಂದು ತಿಳಿಸಿದರು.
ಸಾರ್ವಜನಿಕರು ಪತ್ರಿಕೆ ಓದುವ ಅಭಿರುಚಿಯಿಂದ ದೂರವಾಗುತ್ತಿರುವುದು ವಿಷಾಧನೀಯ. ಸರ್ವರೂ ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಮಾದ್ಯಮಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾ ವಿತರಕರ ಮನವಿಯಲ್ಲಿರುವ ವಿವಿಧ ಬೇಡಿಕೆಗಳನ್ನು ಶೀಘ್ರವಾಗಿ ನಗರಸಭೆ ಇತ್ಯರ್ಥ ಮಾಡುತ್ತದೆ. ದೊಡ್ಡ ಜಾಗ ಒಂದನ್ನು ಗುರ್ತಿಸಿ ನೀಡಬೇಕೆಂದು ಮನವಿ ಮಾಡಿದ ಅವರು, ಇದಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರ ಮೇಲೆ ಒತ್ತಡ ತರಲು ಬದ್ಧವಾಗಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ. ಓಂಕಾರೇಗೌಡ ಮಾತನಾಡಿ, ಪತ್ರಿಕಾ ವಿತರಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹೋರಾಟ ರೂಪಿಸಿದರೆ ಅವರ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಬೆಂಬಲ ವ್ಯಕ್ತಪಡಿಸಿದರು.
ಮೊದಲಿಗೆ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶ್ರೀಧರ್ ಮೋಹನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಧ ರವಿಕುಮಾರ್, ಪತ್ರಿಕಾ ವಿತರಕರ ಸಂಘದ ಸದಸ್ಯರುಗಳಾದ ಷಣ್ಮುಖ, ವಿಜಯ್‌ಕುಮಾರ್, ಗಜೆಂದ್ರ, ಅಭಿಲಾಷ್, ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.
The work of door-to-door newspaper distributors is commendable.
Leave a comment