ಚಿಕ್ಕಮಗಳೂರು: ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತಳಾಗದೆ ಯುದ್ಧವಿಮಾನಗಳನ್ನು ಹಾರಿಸುವ ತನಕ ಬದಲಾಗಿದ್ದಾಳೆ; ಬೆಳೆದಿದ್ದಾಳೆ ಎಂದು ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಹೇಳಿದರು.
ಶುಕ್ರವಾರ ಟೌನ್ ಮಹಿಳಾ ಸಮಾಜದ ನೂತನ ಆಡಳಿತ ಮಂಡಳಿಯ ಅಧಿಕಾರ ಸ್ವೀಕಾರ ಮತ್ತು ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೆ ಮಹಿಳೆ ಕುಟುಂಬಕ್ಕೆ ಮೀಸಲಾಗಿದ್ದು, ಭಾವುಕತೆಯ ಜೀವನ ಅವಳದಾಗಿತ್ತು. ಆದರೆ ಇಂದು ಹಾಗಿಲ್ಲ. ವ್ಯಾಪಾರ-ವಹಿವಾಟು ವಿಚಾರದಲ್ಲೇ ಆಗಲಿ, ಸಾಮಾಜಿಕವಾಗಿ ಅಥವಾ ರಾಜಕೀಯ ವಿಚಾರದಲ್ಲೇ ಆಗಲಿ ಬೆಳೆಯುತ್ತಿದ್ದಾಳೆ. ಇದು ಅತ್ಯಂತ ಸಂತಸದ ಸಂಗತಿ ಎಂದರು.
ಭವಿಷ್ಯದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕೆ ಪೂರಕವಾಗಿ ವೈವಿಧ್ಯಮಯ ತರಬೇತಿ ಕಾರ್ಯಕ್ರಮಗಳನ್ನು ನುರಿತ ತಜ್ಞರಿಂದ ಹಮ್ಮಿಕೊಳ್ಳಲಾಗುವುದು. ಆ ಮೂಲಕ ಮಹಿಳೆ ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕು ಎನ್ನುವುದು ಈ ಉದ್ದೇಶದ ಹಿಂದಿರುವ ಚಿಂತನೆ ಎಂದು ತಿಳಿಸಿದರು.
ಸಾಮಾಜಿಕ ಸಂಸ್ಥೆಗಳನ್ನು ಹುಟ್ಟು ಹಾಕುವುದು ಬಹಳ ಸುಲಭ; ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಪ್ರಯಾಸದ ಕೆಲಸ. ಟೌನ್ ಮಹಿಳಾ ಸಮಾಜ ಮುಂದಿನ ವರ್ಷ ೧೦೦ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಸಂಸ್ಥೆಯ ಸಂಸ್ಥಾಪಕರು, ಹಿಂದಿನ ಅಧ್ಯಕ್ಷರು, ನಿರ್ದೇಶಕರುಗಳು, ಸದಸ್ಯರುಗಳು ತಮ್ಮ ತನು, ಮನ, ಧನದೊಂದಿಗೆ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ಈ ಸಮಾಜ ೧೦೦ ಸಂವತ್ಸರಗಳನ್ನು ತಲುಪಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಸಮಾಜದ ಸದಸ್ಯರು ಮತ ಚಲಾಯಿಸುವುದಕ್ಕೆ ಮಾತ್ರ ಸೀಮಿತವಾಗದೆ ಅಭಿವೃದ್ಧಿ ಸಲುವಾಗಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿ ಜೊತೆ ಕೈಜೋಡಿಸಬೇಕು. ಚುನಾವಣೆ ಸಂದರ್ಭದಲ್ಲಿ ತಮ್ಮ ತಂಡದ ಎಲ್ಲಾ ೧೭ ಸದಸ್ಯರನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಸ್ವಾಗತಿಸಿದ ಸಮಾಜದ ಪ್ರಧಾನ ಕಾರ್ಯದರ್ಶಿ ಶುಭದಾ ಗೌಡ ಮಾತನಾಡಿ, ಟೌನ್ ಮಹಿಳಾ ಸಮಾಜದ ಆಡಳಿತ ಮಂಡಳಿ ಏನೇ ತೀರ್ಮಾನ ಕೈಗೊಂಡರೂ ಅದು ಅಭಿವೃದ್ಧಿಯ ಪರವಾಗಿರುತ್ತದೆ. ಸದಸ್ಯರುಗಳು ಆಡಳಿತ ಮಂಡಳಿಯ ಜೊತೆಗೆ ಬಿಡುವಿನ ವೇಳೆಯಲ್ಲಿ ತೊಡಗಿಸಿಕೊಂಡು ಸೂಕ್ತ ಸಲಹೆ-ಸಹಕಾರ ನೀಡಬೇಕೆಂದು ಕೋರಿದರಲ್ಲದೆ, ಕಾರ್ಯ ನಿರ್ವಹಣೆಯಲ್ಲಿ ಲೋಪ ಕಂಡರೂ ಅವುಗಳ ಬಗ್ಗೆ ತಿಳಿ ಹೇಳಬೇಕು ಎಂದರು.
ಇದೇ ವೇಳೆ ಕಾಲೇಜಿಗೆ ಹಸಿರು ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸಮಾಜದಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಹಿರಿಯ ಸದಸ್ಯರುಗಳಾದ ಗಾಯತ್ರಿ ಗೋವಿಂದಸ್ವಾಮಿ ಹಾಗೂ ಸುಲೋಚನಾ ಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖಜಾಂಚಿ ಗೀತಾ ಸಿಂಗ್ ಹಾಗೂ ಇತರ ನಿರ್ದೇಶಕರುಗಳು ಉಪಸ್ಥಿತರಿದ್ದರು. ಭವಾನಿ ಕಾರ್ಯಕ್ರಮ ನಿರೂಪಿಸಿದರು. ರೀನಾ ಸುಚೇಂದ್ರ ವಂದಿಸಿದರು.
The woman has changed until she flies a fighter jet
Leave a comment