ಚಿಕ್ಕಮಗಳೂರು: ವೇದಾ ನದಿಯ ಅಗ್ರಹಾರ ಬಳಿ ಇರುವ ಚೆಕ್‌ಡ್ಯಾಂನಿಂದ ಹುಲಿಕೆರೆ, ಬೆರಟಿಕೆರೆ, ನಾಗೇನಹಳ್ಳಿಯ ಕೆರೆಗಳಿಗೆ ನೀರೊದಗಿಸುವುದನ್ನು ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟವನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಎಚ್ಚರಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೇದಿಕೆಯ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಸಿ.ಎನ್ ಶಿವಪುರ ಅವರು ಕೆ.ಬಿ ಮಲ್ಲಿಕಾರ್ಜುನ ಶಾಸಕರಾಗಿದ್ದಾಗ ಜಿಗಣೇಹಳ್ಳಿ ಮಾರ್ಗವಾಗಿ ಮಾಡಿದ ಪರಿಣಾಮಕಾರಿ ಕಾಮಗಾರಿಯಿಂದ ಈ ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಸೇರಿದಂತೆ ಭೂಮಿಗಳಿಗೆ ನೀರೊದಗಿಸಲಾಗುತ್ತಿದೆ ಎಂದು ವಿವರಿಸಿದರು.
ಕಳೆದ ೨೦ ವರ್ಷಗಳ ಅಧಿಕಾರವಧಿಯಲ್ಲಿ ಶಾಸಕ ಸಿ.ಟಿ. ರವಿ ಅವರು ಅಯ್ಯನ ಕೆರೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದ ಅವರು, ಜಿ.ಪಂ ಮಾಜಿ ಸದಸ್ಯ ಹೆಚ್.ಸಿ. ಕಲ್ಮರುಡಪ್ಪ ಈ ಸಂಬಂಧ ಸಮಗ್ರ ಮಾಹಿತಿ ಇಲ್ಲದೆ ಪತ್ರಿಕೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆಂದು ದೂರಿದರು.
ಅಯ್ಯನಕೆರೆ ಕೋಡಿಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿಯನ್ನು ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯ ಮೂಲಕ ಯಾವುದೇ ಕಾರಣಕ್ಕೂ ಬೆರಟಿಕೆರೆ, ನಾಗೇನಹಳ್ಳಿ, ಹುಲಿಕೆರೆ ಕೆರೆಗಳಿಗೆ ನೀರು ತುಂಬಿಸುವ ಅನುಮೋದನೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ವೇದಾ ನದಿಗೆ ಅಡ್ಡಲಾಗಿ ಚೆಕ್‌ಡ್ಯಾಂ ನಿರ್ಮಾಣ ಮಾಡಿರುವ ಪರಿಣಾಮ ಅಂತರ್ಜಲ ವೃದ್ಧಿಯಾಗಿ ಈ ಭಾಗದ ರೈತರ ಕೊಳವೆ ಬಾವಿಗಳು ಅನುಕೂಲವಾಗಿವೆ. ಕಡೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಈ ಭಾಗದ ಹಲವು ಕೆರೆಗಳಿಗೆ ಪ್ರಾಕೃತಿಕವಾಗಿ ಮಳೆ ಬಂದಾಗ ನೀರು ಹರಿದುಬರುತ್ತಿದೆ ಎಂದು ಹೇಳಿದರು.
ಅಗ್ರಹಾರದ ಚೆಕ್‌ಡ್ಯಾಂನಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ೨೦೦ ಹೆಚ್.ಪಿ ಮೋಟಾರ್‌ನ್ನು ಅಳವಡಿಸಿ ನೀರೆತ್ತುತ್ತಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಖರಾಯಪಟ್ಟಣ, ಲಕ್ಯಾ ಹೋಬಳಿ ಪರವಾಗಿ ಜುಲೈ.೨೮ ರಂದು ಸರ್ವಪಕ್ಷ ಮತ್ತು ಸಂಘಟನೆಗಳು ವೇದಾ ನದಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆಯೋಜಿಸಿರುವ ಪಾದಯಾತ್ರೆ ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಣ್ಣ, ಮುಖಂಡರಾದ ಉಮಾಕಾಂತ್, ಸಂತೋಷ್, ರೇಣುಕಪ್ಪ, ಗಿರೀಶ್, ಮಂಜು, ಪರಮೇಶ್ವರಪ್ಪ, ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
The plan to fill the lake with the Veda River should be stopped.
Leave a comment