ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದ ಪರಿಣಾಮ, ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗರಿ ಜಲಪಾತವು ಮೈದುಂಬಿ ಹರಿಯುತ್ತಿದ್ದು, ರಾಕ್ಷಸ ಸ್ವರೂಪ ತಳೆದಂತೆ ಕಾಣುತ್ತಿದೆ.
ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿರುವ ಈ ಸುಂದರ ಜಲಪಾತ, ಕಳೆದ ವಾರವರೆಗೆ ಸಾಧಾರಣವಾಗಿ ಹರಿಯುತ್ತಿತ್ತು, ಆದರೆ ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಲಪಾತದ ನೀರಿನ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.
ಧುಮ್ಮಿಕ್ಕುತ್ತಾ ಹರಿಯುತ್ತಿರುವ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಲೆನಾಡು ಈ ಪ್ರಕೃತಿ ವೈಭವಕ್ಕೆ ಸಾಕ್ಷಿಯಾದರೂ, ಇಲ್ಲಿಗೆ ತೆರಳುವ ಪ್ರವಾಸಿಗರು ನಿರಂತರ ಮಳೆಯಿಂದಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಅಗತ್ಯತೆಯಿದೆ.
ನಿನ್ನೆ ಈ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರ್ ಸಂಪೂರ್ಣ ಹಾನಿಗೊಳಗಾಗಿತ್ತು. ಕಾರಿನಲ್ಲಿ ಯಾರು ಇಲ್ಲದ ಪರಿಣಾಮ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ. ಹೀಗಾಗಿ ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುನ್ನ ಗಾಳಿ ಮಳೆಯ ಸ್ಥಿತಿಯನ್ನು ಅವಲೋಕಿಸಬೇಕಿದೆ.
ಇದರ ನಡುವೆಯೂ ನೂರಾರು ಪ್ರವಾಸಿಗರು ಪ್ರತಿನಿತ್ಯ ಕಲ್ಲತ್ತಿಗಿರಿ ಜಲಪಾತದ ಸೌಂದರ್ಯವನ್ನು ಕಣ್ಣುಂಬಿ ಕೊಳ್ಳುತ್ತಿದ್ದಾರೆ.
The flowing Kallatthigiri waterfall
Leave a comment