ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರೀಯ ಹಬ್ಬಗಳಿಗೆ ಬಂದು ಧ್ವಜಾರೋಹಣ ಮಾಡಲು ಮಾತ್ರ ಸೀಮಿತರಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ ಆರೋಪಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಆಶ್ರಯ ಮನೆ ಯೋಜನೆಯಡಿ ಬಸವ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ಯೋಜನೆಯಡಿ ಇದೂವರೆಗೂ ಒಂದೂ ಮನೆ ನೀಡಿಲ್ಲ. ಜಿಲ್ಲೆಯ ಐದೂ ಶಾಸಕರು ಈ ಕುರಿತು ಧ್ವನಿ ಎತ್ತುತ್ತಿಲ್ಲ ಎಂದು ದೂರಿದರು.
ಬಡವರಿಗೆ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡನ್ನು ವಿತರಿಸದ ಕಾರಣ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗಿದೆ. ಜೊತೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದಲಿತರಿಗೆ ಕೊಡುವ ವಿವಿಧ ಇಲಾಖೆಗಳ ಮೂಲಕ ನೀಡಲಾಗುವ ಸೌಲಭ್ಯಗಳನ್ನು ನೀಡಿಲ್ಲ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ರೈತರಿಗೆ ಅನುಕೂಲವಾಗುವಂತೆ ಕೊಳವೆ ಬಾವಿಯನ್ನು ಕೊರೆಸಿಲ್ಲ. ದಲಿತ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಫಾರಂ ನಂ.೫೦, ೫೩, ೫೭ ಅರ್ಜಿಗಳನ್ನು ವಿಲೇವಾರಿ ಮಾಡದೆ ಒಬ್ಬರಿಗೂ ಭೂಮಂಜುರಾತಿ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉಪನೊಂದಣಾಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಮೆಸ್ಕಾಂ, ಅಬಕಾರಿ ಮುಂತಾದ ಇಲಾಖೆಗಳಲ್ಲಿ ಮಧ್ಯವರ್ತಿಗಳಿಲ್ಲದೆ ಜನಸಾಮಾನ್ಯರಿಗೆ ಯಾವುದೇ ಕೆಲಸಗಳಾಗುತ್ತಿಲ್ಲ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅತಿವೃಷ್ಟಿ ಹಾನಿಯಿಂದ ಕಾಫಿ, ಕಾಳುಮೆಣಸು ನೆಲಕಚ್ಚಿದ್ದು, ಬಯಲು ಭಾಗದಲ್ಲಿ ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ಸರ್ಕಾರ ಕೂಡಲೇ ರೈತರಿಗೆ ನೆರವು ನೀಡಲು ಧಾವಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಮಾತನಾಡಿ, ತಾಂಡಾ, ಗೊಲ್ಲರಟ್ಟಿಗಳಿಗೆ ನ್ಯಾಯಬೆಲೆ ಅಂಗಡಿಗಳನ್ನು ಕಳೆದ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದರೂ ರಾಜ್ಯಸರ್ಕಾರ ಈವರೆಗೆ ನ್ಯಾಯಬೆಲೆ ಅಂಗಡಿಯವರು ನೀಡಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಸಿ.ಹೆಚ್. ಲೋಕೇಶ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ಮಾಧ್ಯಮ ಪ್ರಮುಖ್ ದಿನೇಶ್ ಕೋಟೆ, ಮುಖಂಡರಾದ ರಾಜೀವ್, ರೇವನಾಥ್ ಉಪಸ್ಥಿತರಿದ್ದರು.
The district in-charge minister is like a guest actor.
Leave a comment