ಚಿಕ್ಕಮಗಳೂರು: ಮರ್ಲೆ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಮಹಿಳೆ ಕಲ್ಪನಾ ಅವರು ರೈತರ ಸಂಘದ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ಆರೋಪ ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ರೈತ ಸಂಘಟನೆಯ ಕ್ಷಮೆ ಕೇಳಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಮತ್ತು ಮಾಜಿ ಅಧ್ಯಕ್ಷ ಗುರುಶಾಂತಪ್ಪ ಒತ್ತಾಯಿಸಿದರು.
ಜಂಟಿಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ,ಸೈದ್ಧಾಂತಿಕ ಹಿನ್ನಲೆಯಿಂದ ಶಿಸ್ತುಬದ್ಧವಾಗಿ ಕಟ್ಟಿದ ಜನಪರ ಸಂಘಟನೆಯ ಮೇಲೆ ಆರೋಪ ಮಾಡುವಾಗ ಎಚ್ಚರಿಕೆ ಇರಬೇಕು. ಆಧಾರಸಹಿತವಾಗಿರಬೇಕು. ಕೇಳಿದ ತಕ್ಷಣ ನ್ಯಾಯಕೊಡಿಸಲು ಅಂಗಡಿಯಲ್ಲಿ ಮಾರಾಟವಾಗುವ ಸಲಕರಣೆಯಲ್ಲ, ಅನ್ಯಾಯವಾಗಿದ್ದರೆ ಹೋರಾಟದ ಮೂಲಕ ನ್ಯಾಯಪಡೆದುಕೊಳ್ಳಬೇಕಾಗುತ್ತದೆ ಎಂಬ ಸಾಮಾನ್ಯ ತಿಳುವಳಿಕೆ ಇರಬೇಕಾಗುತ್ತದೆ ಎಂದು ಹೇಳಿದರು.
ರೈತ ಸಂಘಟನೆ ಯಾರಹಣ, ಯಾರ ಪ್ರಾಯೋಜಕತ್ವದಲ್ಲಿ ನಡೆಯುವ ಸಂಘಟನೆಯಲ್ಲ, ನಿಮ್ಮ ಮರ್ಜಿಗೆ ಕುಣಿಯಲು ಸಂಘದ ಕಾರ್ಯಕರ್ತರು ನಿಮ್ಮ ಮನೆಯ ಆಳುಗಳಲ್ಲ, ಸಮಸ್ಯೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳಿಗಾಗಿ ಜಿಲ್ಲಾಧಿಕಾರಿ ಕಚೇರಿ,ಅರಣ್ಯ ಇಲಾಖೆ,ಮಾಲಿನ್ಯ ನಿಯಂತ್ರಣ ಮಂಡಳಿ,ಭೂ ವಿಜ್ಞಾನ ಇಲಾಖೆಗಳಿಗೆ ರೈತ ಸಂಘ ಪತ್ರ ಬರೆದು ಉತ್ತರಕ್ಕಾಗಿ ಕಾಯುತ್ತಿದೆ. ಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದಲೇ ಹೋರಾಟಕ್ಕೆ ಚಾಲನೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು ಅಷ್ಟರೊಳಗೆ ಮಹಿಳೆ ರೈತ ಸಂಘದ ಮೇಲೆ ಆರೋಪಮಾಡಿರುವುದು ಸರಿಯಲ್ಲವೆಂದು ತಿಳಿಸಿದರು.
ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಸದಸ್ಯರು, ಗ್ರಾಮಸ್ಥರನ್ನು ಸಂಪರ್ಕಿಸುವಂತೆ ಮಹಿಳೆಯ ಪತಿಗೆ ತಿಳಿಸಿದ್ದು, ಸರಿಯಾಗಿ ಸ್ಪಂದಿಸಲಿಲ್ಲ,ದಲಿತ ಸಂಘಟನೆಯೊಂದಿಗೆ ಮರ್ಲೆ ಕೊಲ್ಲಾಪುರದಮ್ಮನ ದೇವಾಲಯದಿಂದ ಪಾದಯಾತ್ರೆನಡೆಸಿ ಸಮಸ್ಯೆಯ ಗಂಭೀರತೆಯನ್ನು ಸಂಬಂಧಿಸಿದ ಇಲಾಖೆ ಗಮನ ಸೆಳೆಯಲು ಕಾರ್ಯಕ್ರಮ ರೂಪಿಸಲು ಚರ್ಚಿಸುತ್ತಿರುವಾಗಲೇ ಪಲಾಯನ ಮಾಡಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಜಿಲ್ಲಾಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ಮುಖಂಡರಾದ ಪ್ರದೀಪ,. ಎಸ್.ಬಿ.ನಿರಂಜನ ಮೂರ್ತಿ ಇದ್ದರು.
The allegations against the farmers’ association are baseless.
Leave a comment