ಚಿಕ್ಕಮಗಳೂರು : ಹೊಸವರ್ಷ ಆಚರಣೆ ಸಂಬಂಧ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಡಿ.31 ರ ಸಂಜೆ 6 ಗಂಟೆಯಿಂದ ಜ.1ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಿಗೆ ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನೂತನ ವರ್ಷಾಚರಣೆ ಹಿನ್ನೆಲೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆಯಾಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡ ಲಾಗಿದೆ. ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ, ಝರಿಫಾಲ್ಸ್ ಸೇರಿದಂತೆ ಇತರೆ ಕಡೆಗಳಲ್ಲಿ ಮಧ್ಯಪಾನ ಮಾಡುವುದು, ಅಸಭ್ಯವಾಗಿ ವರ್ತಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ಬಂಧವನ್ನು ವಿಧಿಸಲಾಗಿದೆ ಎಂದರು.
ನೂತನ ವರ್ಷಾಚರಣೆ ಸಂದರ್ಭದಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂದು ರೆಸಾರ್ಟ್, ಹೋಮ್‌ಸ್ಟೇ ಮಾಲೀಕರು, ಲಾಡ್ಜ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಭೆ ನಡೆಸಿ ತಿಳುವಳಿಕೆ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ಗಂಟೆ ನಂತರ ಸಾರ್ವಜನಿಕವಾಗಿ ಸೌಂಡ್‌ಸಿಸ್ಟಮ್ ಬಳಕೆ ಮಾಡುವಂತಿಲ್ಲ. ಪಟಾಕಿ ಸಿಡಿಸು ವಂತಿಲ್ಲ. ಇವೆಂಟ್‌ಗಳನ್ನು ಆಯೋಜನೆ ಮಾಡುವ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರು ಇಲಾಖೆಯ ಪರವಾನಿಗೆ ಪಡೆದು ಕೊಳ್ಳುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಸಂಭ್ರಮಾಚರಣೆ ಸಂದರ್ಭದಲ್ಲಿ ರೇವ್ ಪಾರ್ಟಿ ಹಾಗೂ ಡ್ರಗ್ ಸೇವನೆ ಪ್ರಕರಣಗಳು ಕಂಡು ಬಂದರೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಕುಡಿದು ವಾಹನ ಚಲಾಯಿಸುವರು, ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸುವರ ಹಾಗೂ ಬೈಕ್ ವಿಲಿಂಗ್ ಮಾಡುವವರು, ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಅತೀ ವೇಗದಲ್ಲಿ ಚಲಾಯಿಸುವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಆಯಾಕಟ್ಟಿನ ಪ್ರದೇಶದಲ್ಲಿ ತೀವ್ರ ತಪಾಸಣೆ ಒಳಪಡಿಸಲಾಗುವುದು. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಎಚ್ಚರಿಕೆ ನೀಡಿ ದರು.
Leave a comment