ಚಿಕ್ಕಮಗಳೂರು: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ರಾಜಕೀಯ ಲಾಭಕ್ಕೋಸ್ಕರ ಬಜೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿರುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಬಿಡಿಗಾಸನ್ನೂ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದು, ರಾಜ್ಯದಿಂದ ಆರಿಸಿ ಹೋಗಿರುವ ಎಂಪಿಗಳು ತುಟಿ ಬಿಚ್ಚುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಬಜೆಟ್ ಬಗ್ಗೆ ಜನ ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ರಾಜ್ಯದಿಂದ ಎನ್‌ಡಿಎಗೆ ದೊಡ್ಡ ಕೊಡುಗೆ ನೀಡಲಾಗಿದೆ. ೧೮ ಮಂದಿ ಎಂಪಿಗಳನ್ನು ರಾಜ್ಯದಿಂದ ಗೆಲ್ಲಿಸಿ ಕಳುಹಿಸಲಾಗಿದೆ. ಇಲ್ಲಿನ ರೈತರು, ದಲಿತ, ಕಾರ್ಮಿಕ, ಅಲ್ಪಸಂಖ್ಯಾತರ ಬಗ್ಗೆ ಕಿಂಚಿತ್ತು ಆಲೋಚನೆ ಮಾಡದಿರುವ ಕೇಂದ್ರ ಸರಕಾರ ಜನಪರ ಯೋಜನೆಗಳಿಗೆ ಹಣವನ್ನೇ ನೀಡಿಲ್ಲ ಎಂದು ದೂರಿದರು.
ಜಿಲ್ಲೆಯ ಬಯಲು ಭಾಗದ ಕೆರೆ ತುಂಬಿಸುವ ಭದ್ರಾಕಣವೆ ಉಪಯೋಜನೆಗೆ ೫೩೦೦ ಕೋಟಿ ರೂ. ನೀಡಬೇಕಿತ್ತು. ಅದರಲ್ಲಿ ಬಿಡಿಗಾಸು ನೀಡಿಲ್ಲ. ಕರ್ನಾಟಕದ ವಿರೋಧಿಯಾಗಿ ಕೇಂದ್ರ ಸರಕಾರ ನಡೆದುಕೊಂಡಿದೆ. ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ ಎಂದು ಟೀಕಿಸಿದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ, ಉಗ್ರ ಹೋರಾಟ ಮಾಡುತ್ತೇವೆ ಎನ್ನುವವರು ಮಾತೆತ್ತಿದರೆ ಪಾಕಿಸ್ತಾನ, ಮುಸ್ಲಿಂರ ಬಗ್ಗೆ ಕೆಂಡಕಾರುವ ಸಿ.ಟಿ.ರವಿ ಬಜೆಟ್ ಅನ್ಯಾಯದ ಬಗ್ಗೆ ಏಕೆ ಪ್ರಶ್ನೆಮಾಡುತ್ತಿಲ್ಲ ಎಂದ ಅವರು, ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದಜೋಶಿ, ಶೋಭಾಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಮತ್ತಿತರೆ ನಾಯಕರು ಇಲ್ಲಿ ಯಾವುದೋ ಸಣ್ಣ ವಿಚಾರಕ್ಕೆ ಬೊಂಬಡ ಹೊಡೆಯುತ್ತಾರೆ. ಕೇಂದ್ರದಿಂದ ಅನುದಾನ ಏಕೆ ತರಲಿಲ್ಲ. ಇವರಿಗೆ ಮೋದಿ, ಅಮಿತ್‌ಶಾ ಕಂಡರೆ ಭಯವೇ ಎಂದು ಪ್ರಶ್ನಿಸಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕರ್ನಾಟಕ ದೇಶದ ಒಂದು ಅವಿಭಾಜ್ಯ ಅಂಗ, ರಾಜಕೀಯ ಲಾಭಕ್ಕಾಗಿ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಸಿಂಹಪಾಲು ಅನುದಾನ ನೀಡಿ ರಾಜ್ಯಕ್ಕೆ ಬಿಡಿಗಾಸು ನೀಡದಿರುವ ಕೇದ್ರದ ನಡೆ ಘೋರ ಅನ್ಯಾಯ ಎಂದು ಗುಡುಗಿದರು.
ಪರಿಸ್ಥಿತಿ ಹೀಗೇ ಮುಂದುವರಿದರೆ ಎನ್‌ಡಿಎ ವಿರುದ್ಧ ಜನ ತಿರುಗಿ ಬೀಳುವ ಕಾಲ ದೂರವಿಲ್ಲ. ಅವರ ಯಾವುದೇ ಕಾರ್ಯಸೂಚಿಯನ್ನು ಜನ ಒಪ್ಪಿಕೊಳ್ಳದ ಮಟ್ಟಕ್ಕೆ ಹೋಗಲಿದ್ದಾರೆ ಮುಂದೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಮಹಮದ್, ಆನಂದ್, ಶ್ರೀನಿವಾಸ್ ದೇವಾಂಗ, ಶಿವು ಹಿರೇಗೌಜ ಉಪಸ್ಥಿತರಿದ್ದರು.
Stepmotherly attitude of not giving a single penny to the state in the central budget
Leave a comment