ಚಿಕ್ಕಮಗಳೂರು: ಮುಂದಿನ ೩೦ ದಿನಗಳಲ್ಲಿ ನಾಗರಿಕರ ಮೇಲೆ ಅಥವಾ ಯಾವುದೇ ಪ್ರಮುಖ ನೆಲೆ ಮತ್ತು ರಚನೆಗಳ ಮೇಲೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ಮತ್ತು ನಿರಂತರ ಕಟ್ಟೆಚ್ಚರ ವಹಿಸಿ ಕಾವಲು ಕಾಯುವಂತೆ ರಾಜ್ಯದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದ ಮುಖ್ಯಮಂತ್ರಿಗಳು ಮೇ ೧೦ ರಂದು ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಬಳಿಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ. ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು(ಡಿಜಿಎಂಒ)ಗಳು ಭೂಮಿ, ವಾಯು ಮತ್ತು ಸಮುದ್ರದಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸುವುದಾಗಿ ಘೋಷಿಸಿದ ನಂತರ, ಮೇ ೧೦ ಮತ್ತು ೧೧ರ ರಾತ್ರಿ ಪಾಕಿಸ್ತಾನ ಗುಂಡಿನ ದಾಳಿ, ಡ್ರೋನ್ ದಾಳಿಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತುರ್ತು ನಿಯಂತ್ರಣಾ ಕೊಠಡಿ ಸ್ಥಾಪನೆಗೆ ಕ್ರಮ:
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ಕಾರ್ಯ ತತ್ಪರರಾಗಬೇಕು. ಸಾರ್ವಜನಿಕ ಸಮಾರಂಭ ಮತ್ತಿತರ ಸಭೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ನಿಯಮ ಪಾಲನೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಜಿಲ್ಲಾಮಟ್ಟದ ನಿಯಂತ್ರಣ ಕೊಠಡಿ ಸಂಖ್ಯೆಗಳು ಮತ್ತು ೧೧೨ – ಪೊಲೀಸ್ ತುರ್ತು ಸಂಖ್ಯೆಗಳನ್ನು ಜನಪ್ರಿಯಗೊಳಿಸಲು ಮಾಹಿತಿ ಅಭಿಯಾನ ಕೈಗೊಳ್ಳುವುದು. ಕಾನೂನು ಮತ್ತು ಸುವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.ಇತರ ಜಾರಿ ಸಂಸ್ಥೆಗಳ ವಿಸ್ತರಣೆ ಮತ್ತು ಹೆಚ್ಚಿನ ಸೇವೆಗಳಿಗಾಗಿ ಗೃಹರಕ್ಷಕರುಗಳನ್ನು ನಿಯೋಜಿಸಿಕೊಳ್ಳಬೇಕು.
ಯಾವುದೇ ತುರ್ತು ಪರಿಸ್ಥಿತಿ ಅಥವಾ ಘಟನೆಯನ್ನು ತಕ್ಷಣವೇ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಇವರ ಮುಖೇನ ಮುಖ್ಯಮಂತ್ರಿಗಳಿಗೆ ವರದಿ ಮಾಡಬೇಕು. ನಕಲಿ ಅಥವಾ ಸುಳ್ಳು ಸುದ್ದಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುವ ವಿಷಯಗಳನ್ನು ತಕ್ಷಣ ನೈಜ ಸಂಗತಿಯೊಂದಿಗೆ ಪರಿಶೀಲಿಸಿ ಇವುಗಳ ಮೂಲ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು.
ರಕ್ಷಣಾ ವ್ಯವಸ್ಥೆ ಪರಿಶೀಲನೆ ಅಗತ್ಯ:
ಪ್ರಮುಖ ಸಾರ್ವಜನಿಕ ನೆಲೆಗಳು, ಸೂಕ್ಷ್ಮ ಪ್ರದೇಶಗಳು ಮತ್ತು ಸ್ಥಾಪನೆಗಳನ್ನು ಗುರುತಿಸಿ, ಹೆಚ್ಚಿನ ರಕ್ಷಣೆಯನ್ನು ಒದಗಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮತ್ತು ಇತರ ನಾಗರಿಕರ ಸೇವಾ ಇಲಾಖೆಗಳಲ್ಲಿ ಅಗತ್ಯವಿರುವ ರಕ್ಷಣಾ ಉಪಕರಣಗಳು ಮತ್ತು ವಾಹನಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಐತಿಹಾಸಿಕ ದತ್ತಾಂಶಗಳ ಅಧಾರದ ಮೇಲೆ ಹಿಂಸಕರು ಗೂಂಡಾಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಗುರುತಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗಳ (ಬಿಎನ್‌ಎಸ್‌ಎಸ್) ಕಾಯ್ದೆಯಡಿ ಅಗತ್ಯವಿರುವ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು. ಮುನ್ನೆಚ್ಚರಿಕೆಗಳನ್ನು ನೀಡಲು ಅಗತ್ಯವಿರುವ ಸೈರನ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಸೂಕ್ಷ್ಮ ಪ್ರದೇಶಗಳು ಮತ್ತು ಪ್ರಮುಖ ನೆಲೆ ಸ್ಥಾಪನೆಗಳ ಆಸುಪಾಸುಗಳಲ್ಲಿ ಡ್ರೋನ್‌ಗಳ ಹಾರಾಟ ನಿಷೇಧಿಸಬೇಕು.
ಯಾವುದೇ ತುರ್ತು ಪರಿಸ್ಥಿತಿ ಉಂಟಾದ ಸಂದರ್ಭಗಳಲ್ಲಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಪ್ರಸಾರ ಮಾಡಬೇಕು ಹಾಗೂ ಸಮಸ್ಯೆಯನ್ನು ಪರಿಹರಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಂಭವನೀಯ ದಾಳಿಗಳನ್ನು ನಿಯಂತ್ರಿಸಲು ಕಲ್ಪಿಸಲಾದ ಅಣಕು ಪ್ರದರ್ಶನಗಳನ್ನು ಮೇ ೧೭ರೊಳಗೆ ಪೂರ್ಣಗೊಳಿಸಬೇಕು. ನಿರ್ಣಾಯಕ ಮತ್ತು ಪ್ರಮುಖ ಮೂಲ ಸೌಕರ್ಯಗಳ ಉಸ್ತುವಾರಿ ಹೊಂದಿರುವ ಅಧಿಕಾರಿಗಳೊಂದಿಗೆ ಹಾಟ್-ಲೈನ್‌ಗಳನ್ನು ಸ್ಥಾಪಿಸಬೇಕು ಮತ್ತು ಅಣಕು ಪ್ರದರ್ಶನಗಳ ಸಮಯದಲ್ಲಿ ಪರೀಕ್ಷಿಸಬೇಕು.
ಸಮುದಾಯಗಳ ಮುಖಂಡರು ಮತ್ತು ಇತರ ಪ್ರಮುಖ ನಾಗರಿಕರೊಂದಿಗೆ ವಾಟ್ಸಾಪ್ ಗುಂಪುಗಳು ಸಕ್ರಿಯವಾಗಿರಬೇಕು, ಯಾವುದೇ ಸುಳ್ಳು ವದಂತಿಗಳನ್ನು ಹರಡಿದಲ್ಲಿ ತಕ್ಷಣವೇ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು.
ಔಷಧಿ ಲಭ್ಯತೆ-ಆಹಾರ ಸಾಮಗ್ರಿ ಪರಿಶೀಲಿಸಿ:
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವಿಶೇಷವಾಗಿ ನಾಗರಿಕರಿಗೆ ಯಾವುದೇ ತೊಂದರೆ ಮತ್ತು ಅಪಘಾತಗಳನ್ನು ನಿರ್ವಹಿಸಲು ಸನ್ನದ್ಧವಾಗಿರಬೇಕು.
ಅಗತ್ಯ ಆಹಾರ ಸಾಮಗ್ರಿಗಳ ಕೃತಕ ಕೊರತೆ ಸೃಷ್ಟಿಸುವ ಯಾವುದೇ ಸಂಗ್ರಹಣೆ, ದಾಸ್ತಾನು ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಬೇಕು. ನ್ಯಾಯಬೆಲೆ ಅಂಗಡಿಗಳು ಸುಗಮವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಆಹಾರ ಧಾನ್ಯಗಳ ಸಾಗಣೆಯನ್ನು ಮೇಲ್ವಿಚಾರಣೆ ಮಾಡಬೇಕು.
ಸಾರ್ವಜನಿಕರಲ್ಲಿ ವಿಶ್ವಾಸ ಮತ್ತು ಸಾಮರ್ಥ್ಯ ವೃದ್ಧಿ ಹಾಗೂ ಸಿದ್ಧತೆ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು. ಸಂಬಂಧಿತ ಎಲ್ಲ ಇಲಾಖೆಗಳೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಮನ್ವಯ ಸಭೆ ನಡೆಸಿ, ಸಿದ್ಧತೆ ಮತ್ತು ಸಿದ್ಧತೆಯ ಉದ್ದೇಶಕ್ಕಾಗಿ ಮೇಲಿನ ಕ್ರಿಯಾ ಅಂಶಗಳು ಹಾಗೂ ಸಂಬಂಧಿತ ಇಲಾಖಾವಾರು ಕ್ರಿಯಾ ಅಂಶಗಳನ್ನು ಗುರುತಿಸಿ ಕಾರ್ಯ ನಿರ್ವಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.
ಸಂಘರ್ಷ, ದಾಳಿಗಳಿಂದ ಉದ್ಭವಿಸುವ ಪರಿಸ್ಥಿತಿ ಅನ್ವಯ ಮತ್ತು ಪ್ರಸ್ತುತ ಭಾರತ-ಪಾಕಿಸ್ತಾನ ಸಂಘರ್ಷ ಸಂದರ್ಭದಲ್ಲಿ, ಸಿದ್ಧತೆ, ಪ್ರತಿಕ್ರಿಯೆ, ಆಪಾಯಗಳ ಗುರುತಿಸುವಿಕೆ ಮತ್ತು ಅವುಗಳ ನಿರ್ವಹಣೆಗೆ ಅಗತ್ಯವಿರುವ ಕ್ರಮ ಸೇರಿದಂತೆ ಅಗತ್ಯ ಮಾಹಿತಿ ಮತ್ತು ದತ್ತಾಂಶಗಳನ್ನು ಒಳಗೊಂಡ ಅಧ್ಯಾಯವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಸೇರ್ಪಡೆ ಮಾಡಬೇಕು.
ವಿಪತ್ತು ನಿರ್ವಹಣಾ ಪ್ರಾಧಿಕಾರದ್ದೇ ಜವಾಬ್ದಾರಿ:
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ)ಗಳು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಸೆಕ್ಷನ್ ೩೪ ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಸೇರಿದಂತೆ ಯಾವುದೇ ವಿಪತ್ತುಗಳನ್ನು ನಿರ್ವಹಿಸಲು ಎಲ್ಲಾ ಪೂರ್ವಭಾವಿ ಸಿದ್ಧತೆ, ಪರಿಹಾರ ಮತ್ತು ಪ್ರತಿಕ್ರಿಯೆ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿದೆ.
ರಾಜ್ಯದ ಎಲ್ಲಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ)ಗಳು ಮೇಲೆ ಪಟ್ಟಿ ಮಾಡಲಾದ ಮತ್ತು ಜಿಲ್ಲಾಮಟ್ಟದಲ್ಲಿ ಅಗತ್ಯವೆಂದು ನಿರ್ಣಯಿಸಿದ ಸಿದ್ಧತೆ ಮತ್ತು ಸಾರ್ವಜನಿಕ ವಿಶ್ವಾಸ ವೃದ್ಧಿ ಕಾರ್ಯಕ್ರಮಗಳನ್ನು ಖಚಿತಪಡಿಸುವುದು. ಈ ಸಂಬಂಧದ ಚಟುವಟಿಕೆ ಆಯೋಜಿಸಲು ಹಣಕಾಸು ಅನುದಾನಗಳಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಪ್ರಸ್ತಾವನೆಯನ್ನು ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ)ಗೆ ಕಳುಹಿಸಲು ಕೋರಲಾಗಿದೆ.
Statewide alert to prevent any untoward incident
Leave a comment