ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗೌಡ್ತಿಯರ ಟೆನಿಸ್ ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್ ಆಯೋಜಿಸಿದ್ದು ಒಕ್ಕಲಿಗ ಜನಾಂಗದ ಗೌಡ್ತಿ ಮಹಿಳೆಯರು ಅಖಾಡದಲ್ಲಿ ಬ್ಯಾಟ್ ಬೀಸಿ, ಬೌಲಿಂಗ್ ಮಾಡಿ ನಾವೇನು ಕಮ್ಮಿ ಎಂದು ಯುವಕರು ನಾಚಿಸುವಂತೆ ಆಟವಾಡುತ್ತಿದ್ದಾರೆ. ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಇಂದು ಮತ್ತೆ ನಾಳೆ ಗೌಡ್ತಿಯರ ಗೆಲುವಿನ ಕಾಳಗದ ಜಿದ್ದಾಜಿದ್ದಿನಲ್ಲಿ ನಾವಾ-ನೀವಾ ಎಂದು ಮಹಿಳೆಯರಿಗೆ ಮಹಿಳೆಯರೇ ತೊಳು ಏರಿಸಿದ್ದಾರೆ.
ರಾಜ್ಯ ಮಟ್ಟದ ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿದ್ದು, ಕಾಫಿನಾಡ ಇತಿಹಾಸದಲ್ಲೇ ಮೊದಲ ಬಾರಿಗೆ ಗೌಡ್ತಿಯರಿಗಾಗೇ ಕ್ರಿಕೆಟ್ ಆಯೋಜನೆಗೊಂಡಿದೆ. ಈ ಟೂರ್ನಿ ರಾಜ್ಯ ಮಟ್ಟದ ಸ್ಪರ್ಧೆಯಾಗಿರೋದ್ರಿಂದ ರಾಜ್ಯದ ನಾನಾ ಭಾಗಗಳಿಂದಲೂ ಗೌಡ್ತಿಯರು ತಮ್ಮ ಕಲೆ ಪ್ರದರ್ಶನಕ್ಕೆ ಆಗಮಿಸಿದ್ದಾರೆ. ಸಾಮಾನ್ಯವಾಗಿ ಹುಡುಗರಿಗೆ ಕ್ರಿಕೆಟ್ ಟೂರ್ನಿ ಆಯೋಜನೆಯಾಗುತ್ತೆ. ಆದರೆ, ಒಕ್ಕಲಿಗ ಜನಾಂಗದವರೇ ಹೆಚ್ಚಿರೋ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಕ್ಕಲಿಗ ಜನಾಂಗದ ಗೌಡ್ತಿಯರಿಗಾಗೇ ಟೂರ್ನಿ ಆಯೋಜನೆಗೊಂಡಿದೆ.
ಈವರೆಗೂ ಮಹಿಳೆಯರಿಗೆ ಎಲ್ಲೂ ಟೂರ್ನಿಮೆಂಟ್ ಆಯೋಜಿಸರಲಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ ಅನ್ನೋದು ಆಯೋಜಕರ ಮಾತು. ಚಿಕ್ಕಮಗಳೂರು ಒಂದರಲ್ಲೇ ಆಟಗಾರರು ಸಿಗುವುದು ಕಷ್ಟ ಅಂತ ರಾಜ್ಯದ ನಾನಾ ಭಾಗಗಳಿಂದಲೂ ಆಟಗಾರ್ತಿಯರು ಬರುತ್ತಿದ್ದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದ ಗೌಡ್ತಿ ಮಹಿಳೆಯರು ಬ್ಯಾಟಿಂಗ್ ಮಾಡಿ, ಬೌಲಿಂಗ್ ಮಾಡಿ ಮಿಂಚುತ್ತಿದ್ದಾರೆ. ಒಟ್ಟು ಎಂಟು ತಂಡಗಳು ಹೆಸರನ್ನ ನೊಂದಾಯಿಸಿಕೊಂಡಿದ್ದು, ಚಿಕ್ಕಮಗಳೂರಿನ ಐದು ತಂಡದ ಜೊತೆ ಬೆಂಗಳೂರು-ಮೈಸೂರು ಹಾಗೂ ಮಡಿಕೇರಿಯಿಂದಲೂ ತಂಡಗಳೂ ಭಾಗವಹಿಸಿವೆ. ಹುಡುಗಿಯರು-ಮಹಿಳೆಯರು ಇಬ್ಬರೂ ಸೇರೆ ತಂಡ ಮಾಡಿಕೊಂಡಿದ್ದು ಅಖಾಡದಲ್ಲಿ ಹುಡುಗರು ನಾಚಿಸುವಂತೆ ಬ್ಯಾಟಿಂಗ್-ಬೌಲಿಂಗ್ ಮಾಡ್ತಿದ್ದಾರೆ. ಮೊದಲ ಬಹುಮಾನ 1 ಲಕ್ಷ ಇದ್ರೆ, 2ನೇ ಬಹುಮಾನ 70 ಸಾವಿರ. 3ನೇ ಬಹುಮಾನ 50 ಸಾವಿರ ಮತ್ತು 4ನೇ ಬಹುಮಾನ 25 ಸಾವಿರ ಇದ್ದು, 1 ಲಕ್ಷದ ಗೆಲುವಿಗಾಗಿ ಮಹಿಳೆಯರು ಅಖಾಡದಲ್ಲಿ ಹೋರಾಡುತ್ತಿದ್ದಾರೆ.
Leave a comment