ಚಿಕ್ಕಮಗಳೂರು: ಒಂಟಿ ಮಹಿಳೆಯರ ಸರಗಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನರಸಿಂಹರಾಜಪುರ ಪೊಲೀಸ್ ಠಾಣೆ ಪೊಲೀಸರು ಬಂಧಿತರಿಂದ ಅಂದಾಜು ೭ಲಕ್ಷ ರೂ. ಮೌಲ್ಯದ ೬೯ ಗ್ರಾಂ ಚಿನ್ನದ ಆಭರಣ, ೫೦ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಸಾಗರ್ ಹಾಗೂ ಭದ್ರಾವತಿ ಹೊಳೊಹೊನ್ನೂರು ನಿವಾಸಿ ರಾಕೇಶ್ ಎಂಬಾತನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೂ.೨೦ರಂದು ನರಸಿಂಹರಾಜಪುರ ಪಟ್ಟಣದ ಬಾಳೆಹೊನ್ನುರು ರಸ್ತೆಯಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬರು ವಾಕ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಮಹಿಳೆಯನ್ನು ಅಡ್ಡಗಟ್ಟಿ ೩೮ ಗ್ರಾಂ (ಅಂದಾಜು ಮೌಲ್ಯ ೩,೫೦,೦೦೦) ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸರಗಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿ ಅಂದಾಜು ೫೦ ರಿಂದ ೬೦ ಸಿಸಿ ಕ್ಯಾಮಾರಗಳನ್ನು ಪರಿಶೀಲನೆ ನಡೆಸಿದ ಪೊಲೀಸರು, ಅನುಮಾನಸ್ಪದ ಬೈಕ್‌ವೊಂದರ ಬೆನ್ನು ಹತ್ತಿದ ನಂತರ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ಭದ್ರಾವತಿಯಲ್ಲಿ ಒಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಯ ವಿವಿಧೆಡೆಗಳಲ್ಲಿ ಸರಗಳ್ಳತನ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.
ದಕ್ಷಣ ಕನ್ನಡ ಜಿಲ್ಲೆ ಬೆಳ್ತಗಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೩೧ ಗ್ರಾಂ ಚಿನ್ನ ಅಂದಾಜು ಮೌಲ್ಯ ೩.೧೦,೦೦೦, ಶಿವಮೊಗ್ಗ ಜಿಲ್ಲೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂದಾಜು ೫೦ ಸಾವಿರ ರೂ. ಮೌಲ್ಯದ ಹಿರೋ ಸ್ಪೆಡ್ಲರ್ ಪ್ಲೆಸ್ ಬೈಕ್, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎನ್‌ಎಸ್ ಪ್ರಕರಣ ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಸ್‌ಎಸ್ ರೀತ್ಯಾ ಕೃತ್ಯ ನಡೆಸಿರುವುದು ತಿಳಿದಿದೆ.
ಸರಗಳ್ಳತನ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವಿಕ್ರಮ್ ಅಮಟೆ ಶ್ಲಾಘಿಸಿದ್ದಾರೆ.
Single women robbed – Accused arrested
Leave a comment