Home namma chikmagalur ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ?
namma chikmagalurchikamagalurHomeLatest News

ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ?

Share
Share

ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಷ್ಟೊಂದು ಮಾಹಿತಿ ಇರುತ್ತದೆಯೇ ? ಅವರು ಅಷ್ಟೊಂದು ಆಳವಾಗಿ ಬೀದಿ ನಾಯಿಗಳ ಬಗ್ಗೆ ಅಧ್ಯಯನ ಮಾಡಿರುತ್ತಾರೆಯೇ ಅಥವಾ ಕಾನೂನಿನ ಪ್ರಕಾರ ಏನಾದರೂ ಪರಿಹಾರ ಸಿಗಬಹುದು ಎಂದು ಅರ್ಜಿದಾರರು ಭಾವಿಸಿರಬಹುದೇ ? ಇದು ತುಂಬಾ ಸಣ್ಣ ವಿಷಯ ಎನಿಸುವುದಿಲ್ಲವೇ ?

ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಬೀದಿ ನಾಯಿಗಳ ಸಮಸ್ಯೆ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ್ದು ಎನ್ನುವ ಅರಿವಿರುವುದಿಲ್ಲವೇ ? ದೇಶದ ಅತ್ಯಂತ ಪುಟ್ಟ ಹಳ್ಳಿಯಿಂದ ರಾಷ್ಟ್ರದ ರಾಜಧಾನಿಯವರೆಗೂ ಈ ಬೀದಿ ನಾಯಿಗಳ ಬಗ್ಗೆ ಚರ್ಚಿಸುವಂತಹುದೇನಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ, ಪಿಡಿಒ ಇಂದ ಹಿಡಿದು ಕೇಂದ್ರ ಸಂಪುಟ ಕಾರ್ಯದರ್ಶಿ ವರೆಗೆ ಎಷ್ಟೊಂದು ವ್ಯವಸ್ಥೆಗಳಿವೆಯಲ್ಲವೇ ?

ಅಲ್ಲಿನ ಸ್ಥಳಿಯ ಆಡಳಿತ ಅಲ್ಲಿರುವ ಬೀದಿ ನಾಯಿಗಳು, ಅವು ಕೊಡುತ್ತಿರುವ ತೊಂದರೆ, ಅದನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳು ಇತ್ಯಾದಿ ವಿಷಯಗಳನ್ನು ಯೋಚಿಸಿ ಅಲ್ಲಲ್ಲಿಯೇ ನಿರ್ಧಾರ ಮಾಡಬಹುದಲ್ಲವೇ ? ಬಹುತೇಕ ಎಲ್ಲ ಕಡೆ ಪೊಲೀಸ್ ವ್ಯವಸ್ಥೆ ಇದೆ, ಪಶು ವೈದ್ಯಕೀಯ ವ್ಯವಸ್ಥೆ ಇದೆ, ಸ್ಥಳೀಯ ಮಟ್ಟದ ಅಧಿಕಾರಿಗಳು ಇರುತ್ತಾರೆ, ಜನಪ್ರತಿನಿಧಿಗಳು ಇರುತ್ತಾರೆ, ಊರಿನ ಹಿರಿಯರು ಇರುತ್ತಾರೆ. ಇವರೆಲ್ಲ ಸೇರಿ ಬೀದಿ ನಾಯಿಗಳ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸಿ ಒಂದಷ್ಟು ಕ್ರಮ ಕೈಗೊಂಡರೆ ಆ ಸಮಸ್ಯೆ ಅಲ್ಲೇ ಬಗೆಹರಿಯಬಹುದಲ್ಲವೇ ?

ಇದೊಂದು ಗಂಭೀರ ವಿಷಯ ಎನ್ನುವಂತೆ, ಪರವಾಗಿ ಮತ್ತು ವಿರೋಧವಾಗಿ ಚರ್ಚೆಗಳ ಅವಶ್ಯಕತೆ ಇದೆಯೇ ? ಇಬ್ಬರ ವಾದದಲ್ಲೂ ಒಂದಷ್ಟು ಅರ್ಥ ಇನ್ನೊಂದಿಷ್ಟು ಅನರ್ಥ ಎರಡೂ ಇದೆ. ಬೀದಿ ನಾಯಿಗಳ ಹಾವಳಿಯಿಂದ ಸಾಕಷ್ಟು ಜನಕ್ಕೆ ತೊಂದರೆಯೂ ಆಗುತ್ತಿದೆ. ಬಹಳ ಜನ ಬೇಸತ್ತಿದ್ದಾರೆ. ಮುಖ್ಯವಾಗಿ ಹಾಲು, ಪತ್ರಿಕೆ, ಪೋಸ್ಟ್, ಇತರ ಮಾರಾಟದ ವಸ್ತುಗಳನ್ನು ವಿತರಿಸುವವರು, ಹಣ್ಣು ತರಕಾರಿ ಮಾರಾಟ ಮಾಡುವವರು, ನೀರು, ಸರಬರಾಜು, ವಿದ್ಯುತ್ ಬಿಲ್ ಬರೆಯುವವರು, ಶಾಲಾ ವಿದ್ಯಾರ್ಥಿಗಳು, ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ಮರಳುವ ವಿಧ್ಯಾರ್ಥಿನಗಳು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು, ಬಡ ಮಕ್ಕಳು ಮುಂತಾದವರು ಬೀದಿ ನಾಯಿಗಳಿಂದ ತೊಂದರೆ ಅನುಭವಿಸುವುದನ್ನು ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ. ಅದಕ್ಕೆ ಖಂಡಿತ ಪರಿಹಾರ ಬೇಕಿದೆ.

ಸಾಮಾನ್ಯವಾಗಿ ನಾಯಿಗಳನ್ನು ಮನುಷ್ಯರ್ಯಾರು ಕಚ್ಚುವುದಿಲ್ಲ ಅಥವಾ ಅನಾವಶ್ಯಕವಾಗಿ ಕೆಣಕುವುದಿಲ್ಲ. ಅದಕ್ಕೆ ಭಯಪಟ್ಟು ದೂರವೇ ಇರುತ್ತಾರೆ ಎಲ್ಲೋ ಕೆಲವು ಪುಂಡಪೋಕರಿ ಹುಡುಗರನ್ನು ಹೊರತುಪಡಿಸಿ. ಆದರೆ ನಾಯಿಗಳು ಮನುಷ್ಯನನ್ನು ಕಚ್ಚುವುದು ಅತ್ಯಂತ ಸಹಜವಾಗಿದೆ. ಆದ ಕಾರಣ ಬೀದಿ ನಾಯಿಗಳ ನಿಯಂತ್ರಣ ಅತ್ಯಾವಶ್ಯಕ. ಹಾಗೆಯೇ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ. ಅವು ಸಹ ಈ ಸೃಷ್ಟಿಯ, ಈ ಪ್ರಕೃತಿಯ ಒಂದು ಭಾಗ. ಏನು ಅನಿವಾರ್ಯವೋ, ದುರಾದೃಷ್ಟವೋ, ಪರಿಸ್ಥಿತಿಯ ಒತ್ತಡವೋ ಅವು ಬೀದಿ ನಾಯಿಗಳಾಗಿರುತ್ತವೆ. ಅವುಗಳಿಗೆ ಪೋಷಕರು ಇರುವುದಿಲ್ಲ. ಅವುಗಳನ್ನು ಕ್ರೂರವಾಗಿ ಕೊಲ್ಲುವುದು ಸಹ ನಾಗರಿಕ ಸಮಾಜದ ಉತ್ತಮ ಲಕ್ಷಣವಲ್ಲ.

ಆದರೆ ಬೀದಿ ನಾಯಿಗಳಿಗೆ ಒಂದಷ್ಟು ಮಾನವೀಯ ಪ್ರಜ್ಞೆ ಮತ್ತು ನಾಗರಿಕ ಸಮಾಜದ ಲಕ್ಷಣಗಳು ಇರುವುದಿಲ್ಲ. ಅವು ತಮ್ಮಿಷ್ಟದಂತೆ ಬದುಕುತ್ತವೆ. ಆ ಸಂದರ್ಭದಲ್ಲಿ ಹಸಿವಿನಿಂದ ಅಮಾಯಕ ಜನರ ಮೇಲೆ ಹಲ್ಲೆ ಮಾಡುವ ಎಲ್ಲ ಸಾಧ್ಯತೆ ಇರುತ್ತದೆ. ಜೊತೆಗೆ ಕೆಲವೊಮ್ಮೆ ಅನಾರೋಗ್ಯದಿಂದ ಹುಚ್ಚು ಹಿಡಿದಿರಬಹುದು. ಏಕೆಂದರೆ ಪಾಪಾ ಅವಕ್ಕೆ ತಿಳುವಳಿಕೆ ಇಲ್ಲ. ಮನುಷ್ಯರಿಗಾದರೆ ಬುದ್ಧಿ ಹೇಳಬಹುದು ಅಥವಾ ಶಿಕ್ಷಿಸಬಹುದು. ಆದರೆ ನಾಯಿಗೆ ಇದು ಅರ್ಥವಾಗುವುದಿಲ್ಲ.

ಆದ್ದರಿಂದ ನಾವುಗಳೇ ಏನಾದರೂ ಕ್ರಮ ಕೈಗೊಳ್ಳಬೇಕು ಮತ್ತು ಪಶು ವೈದ್ಯಕೀಯಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಬೀದಿಬದಿಯಲ್ಲಿ ಕೈಗೊಳ್ಳಬೇಕಾದ ಉತ್ತಮ ಕ್ರಮಗಳನ್ನು ಕೈಗೊಂಡರೆ ಮುಗಿಯಿತು. ಅದಕ್ಕೆ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಏನು ಹೇಳಿ ಯಾರು ? ಪಾಪ ಅವರಿಗೆ ತಾನೇ ನಾಯಿಕಾಟ ಹೇಗೆ ಗೊತ್ತಾಗುತ್ತದೆ. ಬಹುತೇಕ ಮೇಲಿನ ಸ್ಥರದ ಜನರು ಕಾರುಗಳಲ್ಲಿ ಸೆಕ್ಯೂರಿಟಿ ಯೊಂದಿಗೆ ಓಡಾಡುವುದರಿಂದ ಅವರಿಗೆ ಬೀದಿ ನಾಯಿಗಳ ಸಮಸ್ಯೆ ಅಷ್ಟಾಗಿ ಗೊತ್ತಾಗುವುದಿಲ್ಲ.

ಅದೇನಿದ್ದರೂ ನಮ್ಮಂತ ಪ್ರತಿದಿನವೂ ಬೀದಿಗಳಲ್ಲಿ ಓಡಾಡುವ, ಹಗಲು ರಾತ್ರಿ ಎನ್ನದೆ ದುಡಿಯುವ ನಮಗೆ ನಾಯಿಗಳ ಕಾಟ ಖಂಡಿತ ಗೊತ್ತಿರುತ್ತದೆ. ಆದರೆ ಪರಿಹಾರ ಮಾಡಲು ಮಾತ್ರ ಸ್ಥಳೀಯ ಆಡಳಿತವೇ ಆಗಬೇಕು. ದಯವಿಟ್ಟು ಇನ್ನಾದರೂ ಈ ಹುಚ್ಚಾಟಗಳನ್ನು ನಿಲ್ಲಿಸಿ ಬೀದಿ ನಾಯಿಗಳ ಕಾಟವನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳಿ. ಪ್ರಾಣಿ ದಯಾ ಸಂಘ ಅಥವಾ ಇನ್ಯಾರೇ ಆಗಲಿ ಅನಾವಶ್ಯಕವಾಗಿ ಮನುಷ್ಯರಿಗಿಂತ ಪ್ರಾಣಿಗಳಿಗೆ ಹೆಚ್ಚಿನ ಮಹತ್ವ ಕೊಡುವುದು ಬೇಡ. ಅದು ನಾಯಿ ವಿಷಯ ಮಾತ್ರ ಅಲ್ಲ ಹಸು ಅಥವಾ ಇನ್ಯಾವುದೇ ಪ್ರಾಣಿಯ ವಿಷಯದಲ್ಲೂ ಸಹ ಮೊದಲ ಆದ್ಯತೆ ಮನುಷ್ಯರಿಗೆ ಇರಬೇಕು.

ಹಾಗೆಂದು ಪ್ರಾಣಿಗಳನ್ನು ದ್ವೇಷಿಸಬೇಕೆಂದಿಲ್ಲ. ಅವಕ್ಕೂ ಬದುಕು ಹಕ್ಕು ನೀಡೋಣ. ಆದರೆ ನಮ್ಮ ಸುರಕ್ಷತೆಗೆ ಮೊದಲ ಆದ್ಯತೆ. ಹಣಕೇಂದ್ರಿತ ಭ್ರಷ್ಟ ವ್ಯವಸ್ಥೆಯಲ್ಲಿ ಎಲ್ಲವೂ ಸಮಸ್ಯೆಗಳೇ ಪರಿಹಾರಗಳು ಮಾತ್ರ ಸಿಗುತ್ತಿಲ್ಲ. ಕೊನೆಗೆ ಬೀದಿ ನಾಯಿಗಳು ಸಹ ಸಮಸ್ಯೆಯಾಗಿ ಕಾಡುತ್ತಿವೆ ಎಂದರೆ ನಮ್ಮ ವ್ಯವಸ್ಥೆ ಹೋಗುತ್ತಿರುವ ಅಭಿವೃದ್ಧಿಯ ದಿಕ್ಕು ಮತ್ತೊಮ್ಮೆ ಪರಾಮರ್ಶೆಗೆ ಒಳಪಡಬೇಕು.

ಇತ್ತೀಚೆಗೆ ಎಲ್ಲ ವಿಷಯಗಳಿಗೂ ನ್ಯಾಯಾಲಯವನ್ನು ಎಡತಾಕುವ ಕೆಟ್ಟ ಸಂಪ್ರದಾಯ ಎಲ್ಲಾ ಕ್ಷೇತ್ರಗಳಲ್ಲೂ ತಲೆ ಎತ್ತುತ್ತಿದೆ. ಸ್ಥಳೀಯ ಆಡಳಿತಗಳು ಬಗೆಹರಿಸಿಕೊಳ್ಳಬಹುದಾದ ಸರಳ, ಸಣ್ಣ ವಿವಾದಗಳು ಸಹ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ. ಹಾಗಾದರೆ ಇಲ್ಲಿನ ಹಿರಿಯ ಅಧಿಕಾರಿಗಳು ರಾಜಕಾರಣಿಗಳಿಗೆ ಬಗೆಹರಿಸುವ ಸಾಮರ್ಥ್ಯ ಇಲ್ಲವೇ ಅವರು ಅಸಮರ್ಥರೇ ಯೋಚಿಸಬೇಕಾದ ವಿಷಯ……

ವಿವೇಕಾನಂದ. ಎಚ್. ಕೆ.

Should the Supreme Court intervene to solve the problem of stray dogs?

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...