ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ (ಕೆಆರ್‌ಇಡಿಎಲ್) ₹25 ಲಕ್ಷ ಅನುದಾನ ನೀಡಲಾಗಿದೆ ಎಂದು ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ. ರಾಜೇಗೌಡ ಹೇಳಿದರು.
ರಂಭಾಪುರಿ ಪೀಠದಲ್ಲಿ ವೀರಸೋಮೇಶ್ವರ ಸ್ವಾಮೀಜಿಗೆ ಚೆಕ್ ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಂಭಾಪುರಿ ಪೀಠಕ್ಕೆ ದೇಶದ ವಿವಿಧೆಡೆಯಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳ ಅಗತ್ಯ ಹೆಚ್ಚಿದ್ದು, ಕಾಮಗಾರಿ ನಡೆಸಲು ಅನುಕೂಲವಾಗಲಿದೆ ಎಂದರು. ರಂಭಾ ಪುರಿ ಪೀಠಕ್ಕೆ ತೆರಳುವ ರಸ್ತೆ ಅಭಿವೃದ್ಧಿ, ರೇಣುಕಾಚಾರ್ಯರ 51 ಅಡಿ ಎತ್ತರದ ವಿಗ್ರಹ ನಿರ್ಮಾಣದ ಸ್ಥಳ ಅಭಿವೃದ್ಧಿ, ಸಮುದಾಯ ಭವನ ಅಭಿವೃದ್ಧಿ ಮಾಡಲಾಗುವುದು ಎಂದರು.
ಮುಂಗಾರು ಪೂರ್ವಸಿದ್ಧತೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಲ್ಕೈದು ವರ್ಷಗಳಲ್ಲಿ ಈ ಭಾಗದಲ್ಲಿ ಮಳೆಯಿಂದ ಹಾನಿಯಾದ ಬಗ್ಗೆ ಗಮನದಲ್ಲಿದೆ. ಕೇತ್ರದಲ್ಲಿ ಉಂಟಾದ ಭೂ ಕುಸಿತ, ಸೇತುವೆ, ರಸ್ತೆ, ಮನೆ, ಜೀವ ಹಾನಿ ಬಗ್ಗೆ ಮಾಹಿತಿ ಇದೆ. ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಶೀಘ್ರದಲ್ಲೇ ನಡೆಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್. ಜಯಪ್ರಕಾಶ್, ಬಿ.ಕಣಬೂರು ಗಾಮ ಪಂಚಾಯಿತಿ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಎಂ.ಜೆ. ಮಹೇಶ್ ಆಚಾರ್ಯ, ಬಿ.ಸಿ. ಸಂತೋಷ್ ಕುಮಾರ್, ಇಬ್ರಾಹಿಂ ಶಾಫಿ, ಪಿಎಸಿಎಸ್ ನಿರ್ದೇಶಕ ಕೆ.ಕೆ. ಗೌತಮ್, ಕ್ರೀಡಾಪಟು ಒ.ಡಿ. ಸ್ಟೀಫನ್, ಶಿವಶಂಕರ್, ಕೆ.ಟಿ. ಗೋವಿಂದೇಗೌಡ, ಸುಧಾಕರ್, ಪ್ರಭಾಕರ್ ಶೆಟ್ಟಿ, ವಿನುತ್ ಭಾಗವಹಿಸಿದ್ದರು.
Rs 25 lakh grant for various development works at Rambhapuri Peetha
Leave a comment