ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯಡಿ ೧೮,೪೦,೫೯,೦೦೦ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಯವರ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಟೂಲ್‌ಕಿಟ್ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ೧೭೦೪ ಜನರಿಗೆ ತಲಾ ಒಂದು ಲಕ್ಷ ರೂ.ನಂತೆ ಸಾಲ ವಿತರಿಸಲಾಗಿದೆ. ೬೧೯ ಜನರಿಗೆ ಟೂಲ್‌ಕಿಟ್‌ಗಳನ್ನು ವಿತರಿಸಲಾಗಿದೆ. ಇನ್ನೂ ೫೮೦೩ ಜನರಿಗೆ ಟೂಲ್‌ಕಿಟ್ ಮತ್ತು ಸಾಲ ವಿತರಣೆ ಮಾಡಬೇಕಾಗಿದೆ. ಅಂಚೆ ಇಲಾಖೆ ಮೂಲಕ ಕೂಡ ಟೂಲ್‌ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವೃತ್ತಿಪರ ಕಸುಬುಗಳಿಗೆ ಪೂರಕವಾಗಿ ತರಬೇತಿ ನೀಡಿ ಶೇ.೫ರ ಬಡ್ಡಿ ದರದಲ್ಲಿ ತಲಾ ಒಂದು ಲಕ್ಷ ರೂ. ಸಾಲದ ವ್ಯವಸ್ಥೆ ಕಲ್ಪಿಸಿ, ಆರ್ಥಿಕ ಶಕ್ತಿಯೊಂದಿಗೆ ೧೫ ಸಾವಿರ ರೂ. ಮೌಲ್ಯದ ಅಗತ್ಯ ಸಲಕರಣೆಗಳನ್ನು ಒದಗಿಸಿ ಉತ್ತೇಜಿಸುವ ಮೂಲಕ ಸ್ವಂತ ಉದ್ಯೋಗದ ಮೇಲೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿಯವರು ವಿಶ್ವಕರ್ಮ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ, ಮೀನುಗಾರಿಕೆ ಮತ್ತು ಗಾರೆ ಕೆಲಸ. ವಿಶ್ವಕರ್ಮ ಸಮುದಾಯದವರು ನಿರ್ವಹಿಸುವ ಬಡಗಿ ಕೆಲಸವೂ ಸೇರಿದಂತೆ ೧೮ ಕಸುಬುಗಳು ಈ ಯೋಜನೆಯಲ್ಲಿ ಸೇರಿವೆ. ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ೧೩ ಸಾವಿರ ಕೋಟಿ ರೂ.ಗಳ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಮೊದಲಿಗೆ ಬ್ಯಾಂಕ್‌ಗಳು ಸಾಲ ವಿತರಿಸಲು ಸಿಬಿಲ್ ಸಮಸ್ಯೆಯನ್ನು ಮುಂದಿಟ್ಟಾಗ, ಮಧ್ಯೆ ಪ್ರವೇಶಿಸಿದ ರಿಸರ್ವ್ ಬ್ಯಾಂಕ್ ಸಿಬಿಲ್‌ಗೂ ವಿಶ್ವಕರ್ಮ ಯೋಜನೆಗೂ ಸಿಬಿಲ್‌ಗೂ ಸಂಬಂಧವಿಲ್ಲವೆಂದು ಘೋಷಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸಾಲ ಒದಗಿಸುತ್ತಿವೆ ಎಂದು ತಿಳಿಸಿದರು.
ಹಿಂದೆ ಗ್ರಾಮ ಗ್ರಾಮಗಳಲ್ಲಿ ಕುಂಬಾರಿಕೆ ಕುಲಕಸುಬಾಗಿತ್ತು. ಆದರೆ ಇಂದು ಅಡುಗೆಗೆ ಬಳಕೆಯಾಗುವ ಮಡಿಕೆಗಳಿಗೆ ಬದಲಾಗಿ ಅಲಂಕಾರಿಕ ಮಡಿಕೆಗಳನ್ನು ತಯಾರಿಸಲಾಗುತ್ತಿದೆ. ಅದು ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುವ ಹಂತದಲ್ಲಿದೆ. ಕ್ಷೌರಿಕ ವೃತ್ತಿಯಲ್ಲಿ ವಯಸ್ಸಾಗಿರುವವರು ಆಧುನಿಕತೆಗೆ ಒಗ್ಗಿಕೊಳ್ಳುವುದಕ್ಕೆ ತರಬೇತಿ ನೀಡಲಾಗುವುದು. ಮೀನುಗಾರಿಕೆ ಹಾಗೂ ಗಾರೆ ಕೆಲಸಗಾರರಿಗೆ ಕೂಡ ತರಬೇತಿ ನೀಡಲಾಗುವುದು. ಈ ಯೋಜನೆಯ ಸೌಲಭ್ಯವನ್ನು ವೃತ್ತಿಪರ ಕಸುಬುದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ಉಪಾಧ್ಯಕ್ಷೆ ಅನು ಮಧುಕರ್, ಸದಸ್ಯರು, ಹೆಚ್.ಸಿ.ಕಲ್ಮರುಡಪ್ಪ, ಪೌರಾಯುಕ್ತ ಬಿ.ಸಿ.ಬಸವರಾಜ್, ಅಂಚೆ ಇಲಾಖೆ, ಕೈಗಾರಿಕಾ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.
Rs 14.40 crore to beneficiaries under Vishwakarma scheme
Leave a comment