ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಸಕಾಲದಲ್ಲಿ ಪ್ರಕರಣಗಳ ಬಗ್ಗೆ ಕ್ರಮ ವಹಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಕಾಲಮಿತಿಯೊಳಗೆ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೌರ್ಜನ್ಯ ಪ್ರಕರಣಗಳಿಗೆ ಮಂಜೂರಾದ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಎಸ್‌ಸಿ, ಎಸ್‌ಟಿ ಜನರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ ದೌರ್ಜನ್ಯ ತಡೆಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎನ್.ಆರ್.ಪುರ ತಾಲ್ಲೂಕು ಬನ್ನೂರು ಗ್ರಾಮ ಪಂಚಾಯಿತಿ ಸರ್ವೇ ನಂ.೧೪ ರ ಗೋಮಾಳದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಹಲವಾರು ಬಾರಿ ಸೂಚಿಸಲಾಗಿದ್ದು, ಇನ್ನೂ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಕ್ರಮ ವಹಿಸುವಂತೆ ಎನ್.ಆರ್.ಪುರ ತಾಲ್ಲೂಕು ತಹಸೀಲ್ದಾರರಿಗೆ ಸೂಚಿಸಿದರು.
ಎನ್.ಆರ್.ಪುರ ತಾಲ್ಲೂಕು ಬನ್ನೂರು ಗ್ರಾಮದ ಶೆಟ್ಟಿಹಿತ್ಲು ಸರ್ವೇ ನಂ.೮೯ ಮತ್ತು ೯೫ ರಲ್ಲಿ ೧೦೦ ವರ್ಷಗಳಿಂದ ವಾಸವಿರುವ ೩೦ ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಸ್ವೀಕರಿಸಿ ಕ್ರಮ ವಹಿಸುವಂತೆ ತಿಳಿಸಲಾಗಿತ್ತು. ಈ ಕುರಿತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳು ಪ್ರತಿಕ್ರಿಯಿಸಿ, ಅರಣ್ಯ ಹಕ್ಕು ಅರ್ಜಿಗಳನ್ನು ಸ್ವೀಕಾರ ಮಾಡುವ ಬಗ್ಗೆ ಗ್ರಾಮ ಮಟ್ಟದ ಸಮಿತಿಗಳಿಗೆ ತರಬೇತಿ ನೀಡಿ ಬಾಕಿ ಇರುವ ಹಾಗೂ ಹೊಸದಾಗಿ ಸ್ವೀಕೃತವಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ, ಜನಾಂಗದವರು ವಾಸಿಸುತ್ತಿರುವ ಕಡೂರು ಟೌನ್ ಅಂಬೇಡ್ಕರ್ ನಗರದಲ್ಲಿ ಮಂಜೂರಾಗಿರುವ ಸ್ಮಶಾನ ಭೂಮಿಯನ್ನು ಪುರಸಭೆ ವ್ಯಾಪ್ತಿಗೆ ಬರುವುದಿದ್ದರೆ ಪುರಸಭೆಗೆ ಹಸ್ತಾಂತರಿಸುವಂತೆ ಕಡೂರು ತಹಸೀಲ್ದಾರರಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪವಿಭಾಗಾಧಿಕಾರಿಗಳಾದ ದೇವರಾಜ್, ಕಾಂತರಾಜ್, ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
‘Resolve Scheduled Caste and Scheduled Tribe atrocities cases within time limit’
Leave a comment