ಬೀರೂರು : ‘ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕೊಳಚೆ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದ್ದ ಡಿ.ಡಿ (ಡಿಮ್ಯಾಂಡ್ ಡ್ರಾಫ್ಟ್) ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನೆರವು ಒದಗಿಸಲಿದೆ’ ಎಂದು ಶಾಸಕ ಕೆ.ಎಸ್.ಆನಂದ್ ಪ್ರಕಟಿಸಿದರು.
ಪಟ್ಟಣದಲ್ಲಿ ಶನಿವಾರ ಕೆಆರ್‌ಐಡಿಎಲ್ ವತಿಯಿಂದ ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿ ನವೀಕೃತ ಕಿತ್ತೂರು ರಾಣಿ ಚನ್ನಮ್ಮ ಆಟೊ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಹಲವು ಫಲಾನುಭವಿಗಳು ₹ 65 ಸಾವಿರ ಡಿ.ಡಿ ಹಣ ಪಾವತಿಸಿ, ಇದ್ದ ಮನೆ ಕೆಡವಿ, ಬಾಡಿಗೆ ಮನೆಗಳಿಗೆ ಹೋಗಿ ಇತ್ತ ಮನೆ ನಿರ್ಮಾಣವೂ ಆಗದೆ, ಅತ್ತ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲೂ ಸಾಧ್ಯವಾಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು ರಾಜ್ಯ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದೆ.
ಫಲಾನುಭವಿಗಳಿಂದ ₹1 ಲಕ್ಷ ಪಾವತಿಸಿಕೊಂಡು ಅಂದರೆ ಈ ಹಿಂದೆ ಡಿ.ಡಿ ತೆಗೆದವರು ಬಾಕಿ ₹35 ಸಾವಿರ ಹಣ ಪಾವತಿಸಿದರೆ ಒಟ್ಟಾರೆ ₹6 ಲಕ್ಷದಿಂದ ₹6.50 ಲಕ್ಷದಲ್ಲಿ ಮನೆ ನಿರ್ಮಿಸಿಕೊಡುವ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದೆ. ಇದರಿಂದ ಜನರ ಸೂರಿನ ಸಂಕಷ್ಟ ತಪ್ಪಲಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಈ ವಿಷಯವನ್ನು ಜನರ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಬೀರೂರು ಪಟ್ಟಣದ ಮಾರ್ಗದ ಕ್ಯಾಂಪ್ ಬಡಾವಣೆಯಲ್ಲಿ ಅಮೃತ್–2 ಯೋಜನೆಯಲ್ಲಿ ನೀರು ಸರಬರಾಜು ಮಂಡಳಿಯಿಂದ ನಿರ್ಮಾಣವಾಗು ತ್ತಿರುವ ನೀರಿನ ಟ್ಯಾಂಕ್ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಸಂಬಂಧ ಪಟ್ಟವರಿಗೆ ಸೂಚಿಸುವುದಾಗಿ ಹೇಳಿದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷೆ ವನಿತಾ ಮಧುಬಾವಿಮನೆ, ರಾಜು ಮಾತನಾಡಿದರು. ಪುರಸಭೆ ಸದಸ್ಯರಾದ ಬಿ.ಆರ್.ರವಿಕುಮಾರ್, ಲೋಕೇಶಪ್ಪ, ಗಂಗಾಧರ್, ಜ್ಯೋತಿ ಸಂತೋಷ್, ಶಾರದಾ ರುದ್ರಪ್ಪ, ಕೆಆರ್‌ಐಡಿಎಲ್ ಎಂಜಿನಿಯರ್ ಅಶ್ವಿನಿ, ಪೊಲೀಸ್ ಸಿಪಿಐ ಎನ್.ಎಸ್.ಶ್ರೀಕಾಂತ್, ಪಿಎಸ್‌ಐ ಡಿ.ವಿ.ತಿಪ್ಪೇಶ್ ಹಾಗೂ ಆಟೊ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಜಯರಾಮ್, ಆಟೊ ಚಾಲಕರ ಸಂಘದ ಅಧ್ಯಕ್ಷ ಬಿ.ಎಚ್.ಶ್ರೀನಿವಾಸ್, ಸದಸ್ಯರು ಹಾಜರಿದ್ದರು.
Renovated Kittur Rani Chennamma Auto Stand inaugurated
Leave a comment