ಚಿಕ್ಕಮಗಳೂರು: ಸಖರಾಯಪಟ್ಟಣ ಹೋಬಳಿ ಅಗ್ರಹಾರ ಗ್ರಾಮದ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಪರ-ವಿರೋಧ ವ್ಯಕ್ತವಾಗಿದ್ದು, ಉಭಯ ಕಡೆ ಅಹಿತಕರ ಘಟನೆ ನಡೆಯುವ ಸಂಭವವಿರುವುದರಿಂದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯವರೆಗೆ ಜುಲೈ ೨೮ ರಿಂದ ಆಗಸ್ಟ್ ೩ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ತರೀಕೆರೆ ಉಪವಿಭಾಗಾಧಿಕಾರಿಗಳಾದ ಎನ್.ವಿ.ನಟೇಶ್ ಅವರು ಆದೇಶ ಹೊರಡಿಸಿದ್ದಾರೆ.
ಅಯ್ಯನಕೆರೆಯಿಂದ ಕೋಡಿ ಬಿದ್ದ ನೀರು ವೇದಾವತಿ ಹಳ್ಳದ ಮೂಲಕ ಕಡೂರು, ಯಗಟಿ ಮಾರ್ಗವಾಗಿ ಚಿತ್ರದುರ್ಗ ತಾಲ್ಲೂಕಿನ ಮಾರಿಕಣಿವೆಗೆ ಹರಿಯುತ್ತದೆ. ಹೀಗೆ ಹರಿಯುವ ನೀರನ್ನು ಅಗ್ರಹಾರ ಗ್ರಾಮದ ಬಳಿ ಇರುವ ಚೆಕ್‌ಡ್ಯಾಂ ಮೇಲ್ಭಾಗದಲ್ಲಿ ಸುಮಾರು ೫ ಮೀಟರ್ ಎತ್ತರದಲ್ಲಿ ಟ್ಯಾಂಕ್ ನಿರ್ಮಿಸಿ ಈ ಟ್ಯಾಂಕ್‌ಗೆ ಕೋಡಿ ಬಿದ್ದ ನೀರು ಸಂಗ್ರಹಿಸಿ ಪೈಪ್‌ಲೈನ್ ಮೂಲಕ ನಾಗೇನಹಳ್ಳಿ ಗ್ರಾಮದ ಕಟ್ಟೆ ಹಾಗೂ ಹುಲಿಕೆರೆ ಗ್ರಾಮದ ಕಟ್ಟೆ ಹಾಗೂ ಹುಲಿಕೆರೆಗೆ ಸಮೀಪವಿರುವ ಬೆರಟಿಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ೨೦೨೩ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನಡೆದಿತ್ತು. ಇತ್ತೀಚೆಗೆ ಕಾಮಗಾರಿ ಆರಂಭಗೊಂಡಿದ್ದು, ವೇದಾವತಿ ಹಳ್ಳ ಹರಿಯುವ ಕೆಳಭಾಗದ ಗ್ರಾಮಗಳ ರೈತರು ತಡೆಯೊಡ್ಡಿದ್ದರು.
ವೇದಾವತಿ ಹಳ್ಳ ಹರಿಯುವ ಕೆಳಭಾಗದ ಗ್ರಾಮಗಳ ಗುಬ್ಬಿಹಳ್ಳಿ, ಜಿಗಣೆಹಳ್ಳಿ, ಕುರುಬಗೆರೆ, ದೊಡ್ಡಪಟ್ಟಣಗೆರೆ, ದೊಂಬರಹಳ್ಳಿ, ಚನ್ನಾಪುರ, ಬಂಡಿಕೊಪ್ಪಲು, ಕಡೂರುಹಳ್ಳಿ ಮತ್ತಿತರ ಗ್ರಾಮಗಳ ರೈತರು ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರೆ, ಹುಲಿಕೆರೆ ನಾಗೇನಹಳ್ಳಿ, ಕಂಚುಗಾರನಹಳ್ಳಿ, ಮಡಿಕೆಹೊಸಳ್ಳಿ ಸುತ್ತಮುತ್ತಲ ಗ್ರಾಮಗಳ ರೈತರು ಕಾಮಗಾರಿಯ ಪರವಾಗಿದ್ದಾರೆ.
ಜುಲೈ ೧೯ ರಂದು ಉಭಯ ಕಡೆಯವರು ಅಗ್ರಹಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಭಯ ಬಣದ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಿಗಿ ಪೊಲೀಸ್ ರಕ್ಷಣೆ ಒದಗಿಸಿದ್ದರಿಂದ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗಿರಲಿಲ್ಲ. ಆದರೂ ಉಭಯ ಕಡೆಯ ನಡುವೆ ಯಾವುದೇ ಅಹಿತಕರ ಘಟನೆಗಳ ಸಂಭವಿಸಬಾರದೆನ್ನುವ ದೃಷ್ಟಿಯಿಂದ ಇದೀಗ ನಿಷೇಧಾಜ್ಞೆ ಹೊರಡಿಸಿರುವುದಾಗಿ ಅವರು ತಿಳಿಸಿದ್ದಾರೆ.
Prohibitory order imposed near Agrahara in Sakharayapattana
Leave a comment