ಚಿಕ್ಕಮಗಳೂರು: ಪೋಕ್ಸೋ ಪ್ರಕರಣದಡಿ ಬಂಧನಕ್ಕೊಳಗಾಗಿ ಅಸ್ಸಾಂ ರಾಜ್ಯದ ಮೋರಿಗಾನ್ ಜಿಲ್ಲಾ ಕಾರಾಗೃಹದಲ್ಲಿ ಸಜಾ ಬಂಧಿಗಳಾಗಿದ್ದ ಇಬ್ಬರು ಖೈದಿಗಳು ಅಲ್ಲಿನ ಜೈಲಿನಿಂದ ತಪ್ಪಿಸಿಕೊಂಡು ಚಿಕ್ಕಮಗಳೂರಿನ ಎಸ್ಟೇಟ್ ನಲ್ಲಿ ತಲೆಮರೆಸಿಕೊಂಡಿದ್ದರು. ಈ ಇಬ್ಬರು ಖೈದಿಗಳನ್ನು ಬಂಧಿಸಿ ಅಸ್ಸಾಂ ಪೊಲೀಸರ ವಶಕ್ಕೆ ಒಪ್ಪಿಸುವಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಸ್ಸಾಂ ರಾಜ್ಯದ ಮಿಸ್ಸಾಮುರಿ ಜಿಲ್ಲೆಯ ಕಲ್ ಕುಚ್ಚಿ, ಜಂಗಲ್ ಬಸ್ತಿಯ ಎಂ.ಡಿ.ಜಿಯಾರಲ್ ಇಸ್ಲಾಂ ಹಾಗೂ ಮೋರಿಗಾನ್ ಜಿಲ್ಲೆ ಜಾಗಿರೋಡ್ ನ ಕಾನಬೋರಿ ಗ್ರಾಮದ ಸುಬಾರತ ಸರ್ಕಾರ್ ಬಂಧಿತ ಖೈದಿಗಳು. ಈ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇಬ್ಬರನ್ನು ಅಸ್ಸಾಂನ ಮೋರಿಗಾನ್ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿತ್ತು. ಆದರೆ ಆ. 20ರಂದು ಮೋರಿಗಾನ್ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದರು. ಈ ಸಂಬಂಧ ಅಸ್ಸಾಂ ರಾಜ್ಯದ ಮೋರಿಗಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೈಲಿನಿಂದ ಪರಾರಿಯಾದವರ ಮೊಬೈಲ್ ನ ಸಿಡಿಆರ್ ಆಧರಿಸಿ ಆರೋಪಿಗಳು ಚಿಕ್ಕಮಗಳೂರಿಗೆ ಬಂದಿರುವುದು ಅಲ್ಲಿನ ಪೊಲೀಸರಿಗೆ ದೃಢಪಟ್ಟಿತ್ತು. ಹೀಗಾಗಿ ಅಸ್ಸಾಂ ಪೊಲೀಸರು ಆರೋಪಿಗಳ ಬಂಧನಕ್ಕೆ ಚಿಕ್ಕಮಗಳೂರು ಪೊಲೀಸರ ಸಹಕಾರ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಇನ್ಸ್ಪೆಕ್ಟರ್ ಸಚಿನ್ ನೇತೃತ್ವದಲ್ಲಿ ಪಿಎಸ್ಐ ರಘುನಾಥ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ಆರೋಪಿಗಳ ಪತ್ತೆಗಾಗಿ ರಚನೆ ಮಾಡಲಾಗಿತ್ತು. ಈ ತಂಡ ಚಿಕ್ಕಮಗಳೂರು ತಾಲೂಕಿನ ಮಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಳಸಿನಖಾನ್ ಎಸ್ಟೇಟ್ ನಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹೀಗೆ ವಶಕ್ಕೆ ಪಡೆದ ಆರೋಪಿಗಳನ್ನು ಅಸ್ಸಾಂ ಪೊಲೀಸ್ ಅಧಿಕಾರಿಗಳು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಟ್ರಾನ್ಸಿಸ್ಟ್ ವಾರೆಂಟ್ ಪಡೆದುಕೊಂಡು ಸಜಾ ಬಂಧಿಗಳನ್ನು ಅಸ್ಸಾಂ ರಾಜ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ.
Prisoners who escaped from Assam jail arrested in Coffee Country
Leave a comment