ಚಿಕ್ಕಮಗಳೂರು: ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶ ಬಿದಿರುತಳದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ ನಡೆಸುತ್ತಿದ್ದ ೧೦೩ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .
ಈ ಘಟನೆ ಶನಿವಾರ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯ ಆಳವಾದ ಕಾಡು ಪ್ರದೇಶದಲ್ಲಿ ಸಂಭವಿಸಿದೆ. ಕಾನೂನುಬಾಹಿರವಾಗಿ ಅರಣ್ಯ ಪ್ರದೇಶ ಪ್ರವೇಶಿಸಿ ಟ್ರಕ್ಕಿಂಗ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಬಣಕಲ್ ಹಾಗೂ ಬಾಳೂರು ಪೊಲೀಸ್ ಠಾಣೆಗಳ ಪೊಲೀಸರು ದಾಳಿ ನಡೆಸಿದರು.
ಬಣಕಲ್ ಪಿಎಸ್‌ಐ ರೇಣುಕಾ ಮತ್ತು ಬಾಳೂರು ಪಿಎಸ್‌ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲ್ಲ ೧೦೩ ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ತಂಡದಲ್ಲಿ ಭಾಗವಹಿಸಿದ್ದವರು ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿಗಳ ಉದ್ಯೋಗಿಗಳು ಎಂದು ಮಾಹಿತಿ ಲಭ್ಯವಾಗಿದೆ.
ಕಾರ್ಯಾಚರಣೆ ವೇಳೆ ಪ್ರಯಾಣಿಸಿದ್ದ ಎರಡು ಪ್ರವಾಸಿ ಬಸ್ಸುಗಳು ಹಾಗೂ ಎರಡು ಪಿಕಪ್ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರವಾಸಿಗರನ್ನು ನಿಷೇಧಿತ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು ಸ್ಥಳೀಯ ಒಬ್ಬ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದ್ದು, ಅವರ ಬಗ್ಗೆ ತನಿಖೆ ನಡೆಯುತ್ತಿದೆ.
ಅರಣ್ಯ ಇಲಾಖೆಯ ಅನುಮತಿಯಿಲ್ಲದೇ ನಿಷೇಧಿತ ಪ್ರದೇಶದಲ್ಲಿ ಪ್ರವೇಶಿಸುವುದು ಅರಣ್ಯ ಕಾಯ್ದೆಯ ಪ್ರಕಾರ ಗಂಭೀರ ಅಪರಾಧವಾಗಿದೆ.
ಈ ಹಿನ್ನೆಲೆ, ಬಂಧಿತರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Police arrest 103 tourists for trekking in prohibited forest area
Leave a comment