ಚಿಕ್ಕಮಗಳೂರು: ವಿಮಾ ಕಂತು ಪಾವತಿಯನ್ನು ಸ್ವೀಕರಿಸದೆ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಇನ್ಶೂರೆನ್ಸ್ ಕಂಪನಿಯ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಡ್ಡಿ ಹಾಗೂ ವಿಳಂಬ ಶುಲ್ಕ ವಿಧಿಸದೆ ಪಾಲಿಸಿದಾರರಿಂದ ಕಂತುಗಳನ್ನು ಸ್ವೀಕರಿಸಿ ವಿಮೆಯನ್ನು ಚಾಲ್ತಿಗೊಳಿಸುವಂತೆ ಆದೇಶ ನೀಡಿದೆ.
ಚಿಕ್ಕಮಗಳೂರು ಕೂದುವಳ್ಳಿಯ ಹೆಚ್.ಎಲ್.ಸುದೀಪ್ ಎಂಬುವವರು ಕೆನರಾ ಬ್ಯಾಂಕ್ ಗವನಹಳ್ಳಿ ಶಾಖೆಯ ಗ್ರಾಹಕರಾಗಿದ್ದು, ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಕೆನರಾ ಹೆಚ್‌ಎಸ್‌ಬಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜೀವ ವಿಮಾ ಕಂಪನಿಯಿಂದ ವಿಮೆ ಮಾಡಿಸಿದ್ದರು.
ಕೋವಿಡ್ ಕಾರಣದಿಂದಾಗಿ ೨೦೨೧ ಹಾಗೂ ೨೦೨೨ರ ಕಂತುಗಳನ್ನು ಪಾವತಿಸಿರಲಿಲ್ಲ. ಈ ಬಗ್ಗೆ ವಿಮಾ ಕಂಪನಿಯವರು ನೋಟಿಸು ಜಾರಿಗೊಳಿಸಿದ್ದರಿಂದ ಸುದೀಪ್ ಅವರು ವಿಮಾ ಕಂತನ್ನು ಪಾವತಿಸಿದ್ದರು. ಆದರೆ ಈ ಮೊತ್ತವು ಮರಳಿ ಸುದೀಪ್ ಅವರ ಖಾತೆಗೆ ಜಮೆಯಾಗಿತ್ತು. ಅನಂತರದಲ್ಲಿ ವಿಮಾ ಕಂತನ್ನು ಸ್ವೀಕರಿಸಿ ವಿಮೆಯನ್ನು ನವೀಕರಿಸಿಕೊಡಬೇಕೆಂದು ಕೋರಿದ್ದರೂ ವಿಮಾ ಕಂಪನಿ ಸ್ಪಂದಿಸದೆ ಸೇವಾ ನ್ಯೂನತೆ ಎಸಗಿತ್ತೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸುದೀಪ್ ಖಾತೆ ಹೊಂದಿರುವ ಬ್ಯಾಂಕ್ ಹಾಗೂ ಕೆನರಾ ಹೆಚ್‌ಎಸ್‌ಬಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜೀವ ವಿಮಾ ಕಂಪನಿಯ ನವದೆಹಲಿ ಹಾಗೂ ಹರಿಯಾಣದ ಗುರುಗ್ರಾಮ್ ಕಚೇರಿಯ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ವಿಮಾ ಕಂಪನಿಯು ವಿಮೆಯ ಬಾಕಿ ಕಂತುಗಳನ್ನು ಬಡ್ಡಿ ಹಾಗೂ ವಿಲಂಬ ಶುಲ್ಕವನ್ನು ವಿಧಿಸದೆ ಸ್ವೀಕರಿಸಿ ವಿಮೆಯನ್ನು ಚಾಲ್ತಿಗೊಳಿಸುವಂತೆ ಸೂಚಿಸಿದೆ.
ತಪ್ಪಿದಲ್ಲಿ ದೂರುದಾರರು ಪಾವತಿಸಿರುವ ಮೊತ್ತಕ್ಕೆ ವಾರ್ಷಿಕ ಶೇ.೯ರ ಬಡ್ಡಿ ಹಾಗೂ ಅಸಲು ಮೊತ್ತವನ್ನು, ಅಲ್ಲದೆ ೧೦ ಸಾವಿರ ರೂ.ಗಳನ್ನು ಪರಿಹಾರವಾಗಿ ಮತ್ತು ೫ ಸಾವಿರ ರೂ.ಗಳನ್ನು ಖರ್ಚು-ವೆಚ್ಚವಾಗಿ ನೀಡುವಂತೆ ಆದೇಶ ನೀಡಿದೆ. ಈ ತೀರ್ಪನ್ನು ೪೫ ದಿನಗಳ ಒಳಗೆ ಪಾಲಿಸಬೇಕು. ಇಲ್ಲದಿದ್ದಲ್ಲಿ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ.೬ರ ಬಡ್ಡಿಯನ್ನು ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಕೆನರಾ ಬ್ಯಾಂಕ್ ಗವನಹಳ್ಳಿ ಶಾಖೆಯ ವಿರುದ್ಧದ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ,ಬಮ್ಮನಕಟ್ಟಿ ಅವರು ಈ ತೀರ್ಪನ್ನು ಪ್ರಕಟಿಸಿದ್ದು, ಗ್ರಾಹಕರ ಹಿತರಕ್ಷಣೆ ಮಾಡಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲರಾದ ಹೆಚ್.ಎನ್.ಮಹೇಶ್ ಅವರು ವಾದ ಮಂಡಿಸಿದ್ದರು.
Order to the insurance company to receive the policyholder’s premium
Leave a comment