ಚಿಕ್ಕಮಗಳೂರು: ಅಪಘಾತ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆಪಾದಿತನಿಗೆ ಪ್ರಧಾನ ಸಿ.ಜೆ. ಹಾಗೂ ಜೆಎಂಎಫ್ಸಿ ನ್ಯಾಯಾಲಯವು ಒಂದು ವರ್ಷ ಕಾರಾಗೃಹ ವಾಸ ಹಾಗೂ ೧೨,೦೦೦ ರೂ. ದಂಡ ವಿಧಿಸಿ ತೀರ್ಪಿತ್ತಿದೆ.
ಆಲ್ದೂರು ಸಮೀಪದ ಕೆಳಗೂರು ಗ್ರಾಮದ ಜೆ.ಎಂ.ಜೆ. ನರ್ಸರಿ ಮುಂಭಾಗದ ಮೂಡಿಗೆರೆ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ೨೦೧೯ರ ಡಿಸೆಂಬರ್ ೧ ರಂದು ಡಿ.ಸಿ.ಕೃಷ್ಣಪ್ಪ ಎಂಬುವವರ ಮಗ ಡಿ.ಕೆ.ದಯಾನಂದ ಎಂಬುವವರು ಓಡಿಸುತ್ತಿದ್ದ ಬೈಕ್ಗೆ ಬೆಂಗಳೂರು ರಾಜಾಜಿನಗರದ ದಿ.ಸಣ್ಣಸ್ವಾಮಿ ಎಂಬುವವರ ಮಗ ಎಸ್.ಬಿ.ಸಂದೀಪ್ ಎಂಬವರು ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿಯಾದ ಪರಿಣಾಮ ದಯಾನಂದ ಅವರ ಬೈಕ್ನ ಹಿಂಬದಿ ಸವಾರ ಕುಳಿತಿದ್ದ ಯಲ್ಲಪ್ಪ ಪೂಜಾರಿ ಎಂಬುವವರ ಮಗ ದಯಾನಂದ್ ಎಂಬುವವರಿಗೆ ಹೊಟ್ಟೆ ಹಾಗೂ ಮೂತ್ರಪಿಂಡದ ಹತ್ತಿರ ತೀವ್ರ ಸ್ವರೂಪದ ಗಾಯಗಳಾಗಿದ್ದವು.
ಅವರನ್ನು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಬೈಕ್ ಸವಾರ ದಯಾನಂದ ಅವರ ಎಡಗಾಲಿಗೆ ಸಹ ತೀವ್ರ ಗಾಯವಾಗಿದ್ದರೆ, ಕಾರಿನಲ್ಲಿದ್ದ ವಿಜಯಮಣಿ ಎಂಬುವವರ ಕೈಗೂ ಬಲವಾದ ಪೆಟ್ಟು ಬಿದ್ದಿತ್ತು.
ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಸತ್ಯನಾರಾಯಣ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಸಿ.ಜೆ. ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಟಿ.ಅನುರಾಧ ಅವರು ಆರೋಪಿ ಎಸ್.ಬಿ.ಸಂದೀಪ್ನಿಗೆ ವಿವಿಧ ಕಲಂಗಳಡಿ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ೧೨ ಸಾವಿರ ರೂ. ದಂಡ ವಿಧಿಸಿದ್ದಾರೆ.
ಪ್ರಧಾನ ಸಿ.ಜೆ. ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಕಾನೂನು ಅಧಿಕಾರಿಗಳು (ಹಿರಿಯ) ಮತ್ತು ಪ್ರಭಾರ ಸರ್ಕಾರಿ ಅಭಿಯೋಜಕ ಡಿ.ಬಿನು ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
One year in prison for the accused in the road accident case
Leave a comment