ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಕಾನೂನು ಉಲ್ಲಂಘನೆ ಮಾಡಿ ಗುಹೆಯ ಒಳಭಾಗದಲ್ಲಿ ಮುಸಲ್ಮಾನರು ಹೊಸ ಹೊಸ ಆಚರಣೆ ಮಾಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಪೀಠದ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ದತ್ತಪೀಠದಲ್ಲಿ ಯಾವುದೇ ಹೊಸ ಆಚರಣೆ ಮಾಡುವಂತಿಲ್ಲ. ಆದರೂ ಕಾನೂನನ್ನು ಉಲ್ಲಂಘಿಸಿ ೨೩-೦೧-೨೦೨೬ ರಂದು ಹೊಸದಾಗಿ ಕಲಮ ತಯ್ಯಬಾ ಎಂಬ ಆಚರಣೆ ಮಾಡಿದ್ದಾರೆ. ಅವರಿಗೆ ಜಿಲ್ಲಾಡಳಿತ ಅವಕಾಶ ನೀಡಿರುವುದರಿಂದ ಹಿಂದೂಗಳಿಗೂ ಗುಹೆಯ ಮುಂಭಾಗದಲ್ಲಿ ಹೋಮ ಹವನ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
೧೯೭೮ ರ ದತ್ತಪೀಠದ ವಿಚಾರಣೆಯಲ್ಲಿ ಆಗಿನ ಶಾಖಾದ್ರಿ ದಿವಂಗತ ಸೈಯದ್ ಪೀರ್ ಮೊಹಮದ್ ಅವರು ದತ್ತಪೀಠದಲ್ಲಿ ಪೂಜೆ ಮಾಡುವವರಿಗೆ ಮದುವೆ ಆಗಿರುವಂತಿಲ್ಲ ಮತ್ತು ೨೫ ವರ್ಷಗಳಿಗಿಂತ ಹೆಚ್ಚು ವರ್ಷಗಳ ಕಾಲ ಪೂಜೆ ಮಾಡುವಂತಿಲ್ಲ ಎಂದಿದ್ದಾರೆ. ಆದರೆ, ಈಗಿರುವ ಮುಜಾವರ್ ಗಳಿಗೆ ಮೂವರಿಗೂ ಮದುವೆ ಆಗಿದೆ ಮತ್ತು ಅವರು ೩೫ ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಇರುವುದರಿಂದ ಅವರನ್ನು ಬದಲಾಯಿಸಬೇಕಾಗಿ ಒತ್ತಾಯಿಸಿದರು.
ಹಿಂದೂ ಪೂಜಾ ಪದ್ಧತಿಯಲ್ಲಿ ಅವಿವಾಹಿತರು ಪೂಜೆ ಮಾಡಬೇಕೆಂಬ ನಿಯಮವಿಲ್ಲ. ಆದರೂ ಸಹ ಈಗ ದತ್ತಾತ್ರೇಯ ಸ್ವಾಮಿಯವರ ಪೂಜೆ ಮಾಡುತ್ತಿರುವ ಅರ್ಚಕರು ಅವಿವಾಹಿತರಾಗಿದ್ದಾರೆ. ಈ ಮುಜಾವರ್‌ಗಳನ್ನು ಜಿಲ್ಲಾಡಳಿತ ಮುಂದುವರೆಸಿದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಕೂಡಲೇ ಈ ಮುಜಾವರ್‌ಗಳನ್ನು ಬದಲಿಸಿ ಹೊಸಬರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಅಮಿತ್, ಶ್ಯಾಮ್ ವಿ ಗೌಡ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಸುನಿಲ್, ಮಾತೃಶಕ್ತಿ ಪ್ರಮುಖ್ ಪುಷ್ಪಾಂಜಲಿ, ವಿನುತಾ, ಮೇಘ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
New rituals at Sri Guru Dattatreya Peetha
Leave a comment