ಚಿಕ್ಕಮಗಳೂರು: ಜಗತ್ತಿನಲ್ಲಿ ಅಸಾಧ್ಯ ಎಂಬುವುದಿಲ್ಲ. ಕಷ್ಟಸಾಧ್ಯ ಇದೆ. ನಾಗರಾಳು ಪಂಚಾಯಿತಿಯನ್ನು ಜನಪ್ರತಿನಿಧಿಗಳು ಸಂಕಲ್ಪ ಮಾಡಿದರೆ ಗ್ರಾಮಸ್ಥರ ಸಹಕಾರ, ಸಹಯೋಗದೊಂದಿಗೆ ಕಾರ್ಯೋನ್ಮುಖರಾದರೆ ಯಾವುದೂ ಅಸಾಧ್ಯವಿಲ್ಲ. ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸಲು ಶ್ರಮಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ಅವರು ಇಂದು ಕಡೂರು ತಾಲ್ಲೂಕು ನಾಗರಾಳು ಗ್ರಾ.ಪಂ ಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾ.ಪಂ ಕಡೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೂತನ ಗ್ರಾ.ಪಂ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ನೂತನ ಕಟ್ಟಡಕ್ಕೆ ಜೀವಂತಿಕೆ ಬರುತ್ತದೆ, ಇದಕ್ಕೆ ಪೂರಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಒಗ್ಗಟ್ಟಿನಿಂದ ಜನಸ್ನೇಹಿಯಾಗಿ ಬಳಕೆ ಮಾಡಬೇಕು. ಜೊತೆಗೆ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬೇಕೆಂದು ಹೇಳಿದರು.
ರಾಜ ಮಹಾರಾಜರ ಕಾಲದಿಂದಲೂ ಭಾರತ ವಿಕೇಂದ್ರೀಕರಣ ವ್ಯವಸ್ಥೆಗೆ ಹೆಸರುವಾಸಿಯಾಗಿದ್ದು, ಶಾಲೆಯ ನಿರ್ವಹಣೆಯನ್ನು ಸಮಾಜ ನಿರ್ವಹಣೆ ಮಾಡುತ್ತಿತ್ತು. ಗ್ರಾಮದ ಕೆರೆಕಟ್ಟೆಗಳ ನಿರ್ವಹಣೆ, ದೇವಾಲಯಗಳ ನಿರ್ವಹಣೆ, ನೆಡುತೋಪು ಮುಂತಾದವುಗಳನ್ನು ಗ್ರಾಮವೇ ನಡೆಸುತ್ತಿತ್ತು ಎಂದರು.
ಕಂದಾಯ ಸಂಗ್ರಹ ಮತ್ತು ಹಂಚಿಕೆ ಇದನ್ನೂ ಕೂಡ ಗ್ರಾಮಗಳಲ್ಲಿ ಆಡಳಿತ ನಿರ್ವಹಿಸುತ್ತಿದ್ದವು. ಮುಂದುವರೆದು ಗ್ರಾಮ ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತಂದು ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿದೆ ಎಂದರು. ಸುಮಾರು ೪೭.೫೦ ಲಕ್ಷ ರೂ ವೆಚ್ಚದಲ್ಲಿ ನಾಗರಾಳು ಪಂಚಾಯಿತಿ ನೂತನ ಕಟ್ಟಡ ಸುಂದರವಾಗಿ ನಿರ್ಮಾಣವಾಗಿದೆ. ಇದಕ್ಕೆ ಜಿವಂತಿಕೆ ಬರಬೇಕಾದರೆ ಜನೋಪಯೋಗಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.
ಶಾಸಕ ಹೆಚ್.ಡಿ. ತಮ್ಮಯ್ಯ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್‌ಆರ್‌ಇಜಿಎ ಮತ್ತು ೧೫ನೇ ಹಣಕಾಸು ಯೋಜನೆಯ ಹಣದ ಜೊತೆಗೆ ಗ್ರಾಮ ಪಂಚಾಯಿತಿಯ ಎಲ್ಲಾ ಅಧ್ಯಕ್ಷರು ಸದಸ್ಯರ ವಂತಿಕೆಯ ಮೂಲಕ ೪೭.೫೦ ಲಕ್ಷ ರೂ ವೆಚ್ಚದಲ್ಲಿ ಸುಂದರ ಕಟ್ಟಡ ನಿರ್ಮಾಣ ಮಾಡಿರುವುದು ಲೋಕಾರ್ಪಣೆ ಮಾಡಿದ್ದೇವೆ ಎಂದರು.
ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡಿದರೆ ಪ್ರತಿನಿತ್ಯ ಪೂಜೆ ಸಲ್ಲಿಸುವಂತೆ, ನೂತನ ಗ್ರಾ.ಪಂ ಕಟ್ಟಡ ಕಟ್ಟಿದರೆ ಸ್ಥಳೀಯ ಸಂಸ್ಥೆಗೆ ಹೆಸರು ಬರುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು. ಶೋಷಿತ ವರ್ಗದ ಜನರ ಕಣ್ಣೀರು ಒರೆಸುವ ಅವಕಾಶ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಮೇಲೆ ಇದ್ದು, ಬೀದಿದೀಪ, ಕುಡಿಯುವ ನೀರು, ಚರಂಡಿ ಸ್ವಚ್ಚತೆ ಜೊತೆಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಇ-ಖಾತೆ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಶಶಿಧರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಭಾರಿ ಅಧ್ಯಕ್ಷ ಪ್ರಸನ್ನ, ಎನ್.ಎಸ್ ಬಸವರಾಜ್, ಜಿಪಂ ಮಾಜಿ ಸದಸ್ಯ ವಿಜಯ್‌ಕುಮಾರ್, ಪ್ರವೀಣ್, ಕಲ್ಲಪ್ಪ, ಶಶಿಧರ್.ಜಿ.ಇ, ಚೇತನ್, ರವಿಕುಮಾರ್, ಹೇಮಾವತಿ ನಾಗಪ್ಪ, ಚಂದ್ರಪ್ಪ, ಹೇಮಾವತಿ ನಾಗರಾಜ್, ಚಂದ್ರಬಾಯಿ ರಾಜನಾಯ್ಕ್, ಬಾಬು, ಅಶೋಕ್, ಚಂದ್ರಕಲಾ, ಯಶೋಧಮ್ಮ, ವಿಶಾಲಾಕ್ಷಮ್ಮ, ಶೈಲಜಾ, ಮನೊರಂಜನಿ ರಮೇಶ್, ಆಶಾವಿಜಯ್ ಕುಮಾರ್, ದೇವಿರಮ್ಮ, ಎಂ, ರಂಗಶೆಟ್ಟಿ, ಕವಿತ, ವಿನೋದ ಬಾಯಿ, ಬಾಲಾಜಿ ನಾಯ್ಕ್, ನಳಿನಾ, ಶಂಕರಮೂರ್ತಿ, ಷನ್ಮುಕಣ್ಣ, ನಟರಾಜ್, ವಿಜಯ್ ಕುಮಾರ್.ಜಿ.ಎನ್, ಅಶೋಕ್.ಸಿ.ಎಸ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಶಾರದ ಸ್ವಾಗತಿಸಿದರು.
Nagaralu Panchayat worked hard to become a model Gram Panchayat.
Leave a comment