ಚಿಕ್ಕಮಗಳೂರು: ರಾಜ್ಯದ ೫೧ ಮೂಲ ಬುಡಕಟ್ಟು ಜನಾಂಗದ ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿರುವ ಅರಣ್ಯ ಭೂಮಿಯ ಜ್ವಲಂತ ಸಮಸ್ಯೆಯ ಕುರಿತು ಚರ್ಚಿಸಿ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಇದೇ ಮೇ.೨೫ ರಂದು ಬೆಳಗ್ಗೆ ೧೦.೩೦ ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆದಿವಾಸಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಗೌಡ್ಲು ಅವರು ಈ ವಿಚಾರ ಸಂಕಿರಣವನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಲಿದ್ದಾರೆ. ಪರಿಷತ್ ರಾಜ್ಯಾಧ್ಯಕ್ಷ ಎಂ. ಕೃಷ್ಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಾಗವಹಿಸಲಿದ್ದಾರೆ ಎಂದರು.
ಅಖಿಲ ಭಾರತೀಯ ವಿಕಾಸ ಪರಿಷತ್ ದಕ್ಷಿಣ ಪ್ರಾಂತೀಯ ಅಧ್ಯಕ್ಷ ತಿರುಕೇಶವನ್,ಚೆನ್ನೈ ರಾಷ್ಟ್ರೀಯ ಆದಿವಾಸಿ ವಿಕಾಸ ಪರಿಷತ್ ಸದಸ್ಯ ತಿರುಮಾಧವನ್, ಆದಿವಾಸಿ ರಕ್ಷಣಾ ಪರಿಷತ್ ಗೌರವಾಧ್ಯಕ್ಷ ಹಂಪಿ ಕನ್ನಡ ವಿ.ವಿ ಬುಡಕಟ್ಟು ಸಂಶೋಧನಾ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಎಂ. ಮೈತ್ರಿ, ರಾಜ್ಯ ಅನಿವಾಸಿ ರಕ್ಷಣಾ ಪರಿಷತ್ ಕಾರ್ಯಾಧ್ಯಕ್ಷ ಮಹಾಂತೇಶ್ ಎಸ್ ಕೌಲಗಿ, ಕಾನೂನು ಸಲಹೆಗಾರ ಮಧುಕುಮಾರ್, ಚಿತ್ರದುರ್ಗ, ಮೈಸೂರು ಲ್ಯಾಂಪ್ಸ್ ಮಹಾಮಂಡಲ ಅಧ್ಯಕ್ಷ ಬಿ. ಕಾವೇರ ಸೇರಿದಂತೆ ವಿವಿಧ ಆದಿವಾಸಿ ಸಮುದಾಯಗಳ ಮುಖಂಡರುಗಳು ಭಾಗವಹಿಸಲಿದ್ದಾರೆಂದು ಹೇಳಿದರು.
ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೇಶ್ ಮಾತನಾಡಿ, ರಾಜ್ಯದಲ್ಲಿರುವ ಬುಡಕಟ್ಟು ಜನಾಂಗದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆಯಲು ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ವಿಚಾರ ಸಂಕಿರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರು, ಸಾರ್ವಜನಿಕರು ಲ್ಯಾಂಪ್ಸ್ ಸಹಕಾರಿ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿವಾಸಿ ರಕ್ಷಣಾ ಪರಿಷತ್ ಮುಖಂಡರುಗಳಾದ ಮುದ್ದಪ್ಪ, ರಮೇಶ್, ಶಂಕರ್, ಜಿ.ಬಿ. ಚಂದ್ರು ಮತ್ತಿತರರು ಉಪಸ್ಥಿತರಿದ್ದರು
May 25: Adivasi symposium at Ambedkar Bhavan
Leave a comment